ಪ್ರಜ್ವಲ್ ಬಂಧನದಿಂದ ಪಕ್ಷದ ಮೇಲೆ ಪರಿಣಾಮ ಬೀರಲ್ಲ: ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ.ದೇವೇಗೌಡ

| Published : Jun 01 2024, 12:46 AM IST

ಪ್ರಜ್ವಲ್ ಬಂಧನದಿಂದ ಪಕ್ಷದ ಮೇಲೆ ಪರಿಣಾಮ ಬೀರಲ್ಲ: ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ.ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್ ರೇವಣ್ಣ ಬಂಧನದಿಂದ ಪಕ್ಷದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಎಸ್‌ಐಟಿ ತನಿಖೆಗೆ ಬೆಂಬಲಿಸುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು. ಹಾಸನದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಎಸ್ಐಟಿ ತನಿಖೆಗೆ ಬೆಂಬಲಿಸುತ್ತೇವೆ । ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು

ಕನ್ನಡಪ್ರಭ ವಾರ್ತೆ ಹಾಸನ

ಪ್ರಜ್ವಲ್ ರೇವಣ್ಣ ಬಂಧನದಿಂದ ಪಕ್ಷದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಎಸ್‌ಐಟಿ ತನಿಖೆಗೆ ಬೆಂಬಲಿಸುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಜ್ವಲ್ ರೇವಣ್ಣ ಬಂಧನ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಪ್ರಜ್ವಲ್ ಅವರನ್ನು ನಮ್ಮ ಪಕ್ಷದಿಂದ ಅಮಾನತು ಮಾಡಿದ್ದೇವೆ. ಈ ಸಂಬಂದ ತನಿಖೆ ನಡೆಯುತ್ತಿದೆ. ವಿಡಿಯೋ ಹಂಚಿದವರ ವಿರುದ್ಧ ಕ್ರಮ ಆಗಿಲ್ಲ ಎನ್ನುವ ಆಕ್ರೋಶ ಕೂಡ ಇದೆ. ಪ್ರಜ್ವಲ್ ಬಂಧನ ಆಗಿದೆ. ನಾವು ಯಾವುದೇ ಕಾರಣದಿಂದ ತನಿಖೆಯಲ್ಲಿ ಹಸ್ತಕ್ಷೇಪ ಮಾಡೋದಿಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಲಾಗಿದೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ಸರ್ಕಾರ ನ್ಯಾಯ ಕೊಡಬೇಕು. ಪ್ರಜ್ವಲ್ ರೇವಣ್ಣ ಬಂಧನದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ’ ಎಂದು ಹೇಳಿದರು.

ವಾಲ್ಮೀಕಿ ನಿಗಮದ ನೌಕರ ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಈ ಸರ್ಕಾರ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಹೇಳಿದ್ದರು. ಈಗ ಏನಾಗಿದೆ ಎಂದು ಸ್ಪಷ್ಟವಾಗಿದೆ. ಈ ಪ್ರಕರಣ ಸಂಬಂಧ ಸಚಿವರ ರಾಜೀನಾಮೆ ಪಡೆಯಬೇಕು. ಅವರು ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದಾರೆ. ಡೆತ್ ನೋಟ್ ಇದೆ ಎಂದ ಮೇಲೆ ರಾಜೀನಾಮೆ ಕೊಡಬೇಕಿತ್ತು. ಅಲ್ಲವೇ? ಈಗಲಾದರು ಸಚಿವರ ರಾಜಿನಾಮೆ ಪಡೆಯಿರಿ’ ಎಂದು ಆಗ್ರಹಿಸಿದರು.

‘ಅಧಿಕಾರಿಯ ಆತ್ಮಹತ್ಯೆ ಆಗಿದ್ದು, ಕಾಂಗ್ರೆಸ್‌ನವರು ನಮ್ಮಲ್ಲಿ ಭ್ರಷ್ಟಾಚಾರ ಇಲ್ಲ, ಬಿಜೆಪಿ 40% ಕಮೀಷನ್ ಸರ್ಕಾರ ಅಂತ ಹೇಳುತ್ತಿದ್ದರು. ಭ್ರಷ್ಟಾಚಾರದ ಆಪಾದನೆಯಿಂದ ಇವತ್ತು ಅಧಿಕಾರಿ ಸಾವನ್ನಪ್ಪಿದ್ದಾರೆ. ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು. ಡೆತ್‌ ನೋಟ್ ಬರೆದಿಟ್ಟು ಅಧಿಕಾರಿ ಸಾವನ್ನಪ್ಪಿದ್ದಾರೆ. ಕೂಡಲೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕಿತ್ತು. ಕಾಂಗ್ರೆಸ್ ಸರ್ಕಾರಕ್ಕೆ ವಿರೋಧ ಪಕ್ಷಗಳು ಏನೇ ಒತ್ತಾಯಿಸಿದರು. ಈಗಲಾದರೂ ಕೂಡ ರಾಜೀನಾಮೆ ಕೊಡಬೇಕು. ಸರ್ಕಾರ ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ’ ಎಂದು ಹೇಳಿದರು.

ತಮ್ಮ ವಿರುದ್ಧ ಮಾಟ ಮಾಡಿಸುತ್ತಿದ್ದಾರೆ ಎಂಬಧುಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಈ ಯಾಗಗಳು, ಪೂಜೆಗಳ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರೇ ಅದು ಏನೆಂದು ಹೇಳಬೇಕು. ಕುಮಾರಸ್ವಾಮಿ ಅವರು ಮಡಿಕೇರಿಯಲ್ಲಿದ್ದಾರೆ ಅವರಿಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

‘ನಾನು ಉನ್ನತ ಶಿಕ್ಷಣ ಸಚಿವನಾಗಿ ಸಾಕಷ್ಟು ಮೂಲಭೂತ ಸೌಕರ್ಯಗಳ ನೀಡಲು ಕೆಲಸ ಮಾಡಿದ್ದೇವೆ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರ ಸಾಹಸದಿಂದ ಸಾಕಷ್ಟು ಸರ್ಕಾರಿ ಶಾಲೆ ಕಾಲೇಜು ಬಂದಿದೆ. ಜಿಲ್ಲೆಯಲ್ಲಿ ಮೂರುವರೆ ಸಾವಿರ ಮತದಾರರಿದ್ದಾರೆ. ಎಲ್ಲರೂ ನಮ್ಮ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಬೆಂಬಲಿಸುವ ವಿಶ್ವಾಸ ಇದೆ. ಮರಿತಿಬ್ಬೇಗೌಡರು ನಾಲ್ಕು ಬಾರಿ ಆಯ್ಕೆಯಾಗಿದ್ದರು. ಅವರು ನಮ್ಮ ಪಕ್ಷದಲ್ಲಿ ಇದ್ದು ಕಳೆದ ವಿಧಾನಸಭೆ ಚುನಾವಣಾ ವೇಳೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಈಗ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲೇ ಆಕ್ರೋಶ ಇದ್ದು, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ನಾವು 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.