ಸಾರಾಂಶ
ದಟ್ಟ ಅರಣ್ಯ ಸುತ್ತಲೂ ಸಹಸ್ರ ಸಂಖ್ಯೆಯಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಬಿಲ್ವಪತ್ರೆ ಗಿಡಗಳು, ಪೂಜನೀಯ ಭಾವನೆ ಬಿಂಬಿಸುವ ಪತ್ರಿವನದಿಂದ ಆವೃತವಾಗಿರುವ ಐತಿಹಾಸಿಕ ಸ್ಥಳವಾದ ಮುಂಡಗೋಡ ಪಟ್ಟಣದ ಹೊರ ವಲಯದ ಪಾರ್ವತಿ-ಪರಮೇಶ್ವರ ದೇವಾಲಯವೀಗ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ.
ಸಂತೋಷ ದೈವಜ್ಞ
ಮುಂಡಗೋಡ: ದಟ್ಟ ಅರಣ್ಯ ಸುತ್ತಲೂ ಸಹಸ್ರ ಸಂಖ್ಯೆಯಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಬಿಲ್ವಪತ್ರೆ ಗಿಡಗಳು, ಪೂಜನೀಯ ಭಾವನೆ ಬಿಂಬಿಸುವ ಪತ್ರಿವನದಿಂದ ಆವೃತವಾಗಿರುವ ಐತಿಹಾಸಿಕ ಸ್ಥಳವಾದ ಪಟ್ಟಣದ ಹೊರ ವಲಯದ ಪಾರ್ವತಿ-ಪರಮೇಶ್ವರ ದೇವಾಲಯವೀಗ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನ ಈ ದೇವಾಲಯಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಪ್ರದೇಶಕ್ಕೆ ಪವಿತ್ರ "ಪತ್ರೆವನ " ಎಂದೂ ಕರೆಯುತ್ತಾರೆ. ಶಿವರಾತ್ರಿ ದಿನವಂತೂ ಇಲ್ಲಿ ಜನಸಾಗರವೇ ಸೇರುತ್ತದೆ. ಅಂದು ಜಾತ್ರಾ ಮಹೋತ್ಸವ ಕೂಡ ನಡೆಯುತ್ತದೆ. ಪಾದಯಾತ್ರೆ ಮೂಲಕ ದಂಡು ದಂಡಾಗಿ ಬರುವವರ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಆದರೆ ಶಿವರಾತ್ರಿ ಉತ್ಸವ ಮುಗಿಯುತ್ತಿದ್ದಂತೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ನಿತ್ಯ ಈ ಮಾರ್ಗವಾಗಿ ಸಂಚರಿಸುವ ಪ್ರತಿಯೊಬ್ಬರೂ ಇಲ್ಲಿ ನಿಂತು ದೇವರಿಗೆ ನಮಸ್ಕರಿಸಿಯೇ ಹೋಗುತ್ತಾರೆ.
ನೂರಾರು ವರ್ಷ ಇತಿಹಾಸವಿರುವ ಈ ದೇವಾಲಯದ ಅಭಿವೃದ್ಧಿ ಮಾತ್ರ ಶೂನ್ಯ. ಈ ದೇವಾಲಯವೀಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದೆ.ಪುನರುಜ್ಜೀವನವಾಗಲಿ:
ಪಾರ್ವತಿ -ಪರಮೇಶ್ವರ ದೇವಾಲಯ ಅಭಿವೃದ್ಧಿಯಿಲ್ಲದೆ ಶಿಥಿಲಾವಸ್ಥೆ ತಲುಪಿರುವುದು ಶೋಚನಿಯ. ಸುತ್ತ ಪತ್ರಿವನ ಇರುವುದರಿಂದ ಉತ್ತಮ ವಾತಾವರಣವಿದೆ. ಅಧಿಕೃತವಾಗಿ ಪತ್ರೆವನ ನಿರ್ಮಾಣ ಮಾಡಿದರೆ ದೇವಾಲಯ ಕೂಡ ಪುನರುಜ್ಜೀವನಗೊಳ್ಳಲಿದೆ ಎಂದು ಹಿರಿಯ ಪೋಸ್ಟ್ ಮಾಸ್ಟರ್ ದಿನೇಶ ವೆರ್ಣೇಕರ ಹೇಳಿದರು.