ಕೇಂದ್ರ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿ ನೀಟ್‌ ಸೇರಿದಂತೆ ನಾಲ್ಕು ನಿರ್ಣಯ ಮಂಡಿಸಿ ಅಂಗೀಕಾರ

| Published : Jul 26 2024, 01:41 AM IST / Updated: Jul 26 2024, 05:54 AM IST

ಕೇಂದ್ರ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿ ನೀಟ್‌ ಸೇರಿದಂತೆ ನಾಲ್ಕು ನಿರ್ಣಯ ಮಂಡಿಸಿ ಅಂಗೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

  ಕೇಂದ್ರ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿ ನಾಲ್ಕು ನಿರ್ಣಯಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.ಪಪ

 ಬೆಂಗಳೂರು : ಕೇಂದ್ರ ಸರ್ಕಾರದ ‘ನೀಟ್‌’ ವಿರೋಧಿಸುವುದು, ‘ಒಂದು ದೇಶ ಒಂದು ಚುನಾವಣೆ’ ನೀತಿಯನ್ನು ಅನುಷ್ಠಾನಗೊಳಿಸದಂತೆ ಒತ್ತಾಯಿಸುವುದು, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು 1971ರ ಜನಸಂಖ್ಯೆ ಆಧಾರದ ಮೇಲೆಯೇ ನಡೆಸುವಂತೆ ಆಗ್ರಹಿಸುವುದು ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿ ನಾಲ್ಕು ನಿರ್ಣಯಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಮುಡಾ ಪ್ರಕರಣದ ಸಂಬಂಧ ಧರಣಿ ನಡೆಸುತ್ತಿರುವಾಗಲೇ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ನಾಲ್ಕು ನಿರ್ಣಯಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಕೇಂದ್ರದ ಬುಡಕಟ್ಟು ಅಧಿನಿಯಮಕ್ಕೆ ತಿದ್ದುಪಡಿಗೆ ಒತ್ತಾಯಿಸುವ ನಿರ್ಣಯ 4ನೆಯದ್ದಾಗಿದೆ.

ಈ ವೇಳೆ ಮುಡಾ ಗದ್ದಲದ ನಡುವೆಯೇ ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧದ ನಿರ್ಣಯಕ್ಕೆ ಬಿಜೆಪಿ ಸದಸ್ಯರ ಪರ ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಬೆಂಬಲ ಘೋಷಿಸಿದರು.

‘ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು ಈಗಿನ ಜನಗಣತಿ ಪ್ರಕಾರ ಮಾಡಬಾರದು. ಲೋಕಸಭೆ ಕ್ಷೇತ್ರಗಳನ್ನು ಕಡಿಮೆ ಮಾಡಿ ಲೋಕಸಭೆಯಲ್ಲಿ ರಾಜ್ಯದ ಪ್ರಾತಿನಿಧ್ಯತೆ ಕಡಿಮೆ ಮಾಡಬಾರದು. ರಾಜ್ಯ ಸರ್ಕಾರದ ಈ ನಿರ್ಣಯಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದರು.

ನೀಟ್‌ಗೆ ವಿನಾಯಿತಿ ನೀಡಿ, ಸಿಇಟಿ ಪರಿಗಣಿಸಿ:

ಪುನರಾವರ್ತಿತ ಅಕ್ರಮಗಳಿಂದ ನೀಟ್‌ ಮೇಲೆ ವಿಶ್ವಾಸ ಹೋಗಿದೆ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್‌ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕ ಆಧರಿಸಿ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.

ನಿರ್ಣಯದಲ್ಲಿ ‘ನೀಟ್‌ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ನಿರರ್ಥಕಗೊಳಿಸುತ್ತಿದೆ. ಜತೆಗೆ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರುತ್ತಿದ್ದೇವೆ. ಕರ್ನಾಟಕಕ್ಕೆ ನೀಟ್‌ನಿಂದ ವಿನಾಯಿತಿ ನೀಡಬೇಕು. ಅಲ್ಲಿನ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲೂ ನೀಟ್‌ ವ್ಯವಸ್ಥೆ ರದ್ದುಪಡಿಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ-2019 (2019ರ ಕೇಂದ್ರ ಅಧಿನಿಯಮ 30)ರಲ್ಲಿ ಅಗತ್ಯ ತಿದ್ದುಪಡಿಗಳನ್ನೂ ಸಹ ಮಾಡಬೇಕು’ ಎಂದು ಕೇಂದ್ರವನ್ನು ಒತ್ತಾಯಿಸಲಾಗಿದೆ.

1971ರ ಜನಗಣತಿ ಆಧರಿಸಿ ಕ್ಷೇತ್ರ ವಿಂಗಡಣೆ ಮಾಡಿ:

ಕೇಂದ್ರ ಸರ್ಕಾರವು 2026ರಲ್ಲಿ ನಡೆವ ಅಥವಾ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ನಡೆಸಬಾರದು. ಈ ರೀತಿ ಮಾಡಿದರೆ ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಸ್ಥಾನಗಳು ಕಡಿಮೆಯಾಗಲಿವೆ. ರಾಜ್ಯದ ಪ್ರಾತಿನಿಧ್ಯತೆ ಕುಸಿಯಲಿದೆ ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.

ನಿರ್ಣಯದಲ್ಲಿ ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.

ಒಂದು ದೇಶ, ಒಂದು ಚುನಾವಣೆ ಬೇಡ:

ದೇಶದ ಪ್ರಾದೇಶಿಕತೆ, ಸಮಗ್ರತೆಗೆ ಧಕ್ಕೆ ತರುವ ಒಂದು ದೇಶ, ಒಂದು ಚುನಾವಣೆಯಂತಹ ಕಠೋರ ನೀತಿ ಅನುಷ್ಠಾನ ಬೇಡ ಎಂದು ಒತ್ತಾಯಿಸುವ ನಿರ್ಣಯವನ್ನೂ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಯಿತು. ಈ ನಿರ್ಣಯವನ್ನು ಬಿಜೆಪಿ ಸದಸ್ಯರು ವಿರೋಧಿಸಿ ಒಂದು ದೇಶ, ಒಂದು ಚುನಾವಣೆ ಪರವಾಗಿ ಮಾತನಾಡಿದರು.

ಈ ನಿರ್ಣಯದಲ್ಲೇನಿದೆ?:

ಭಾರತವು ವಿಶ್ವದ ಅತಿದೊಡ್ಡ ಒಕ್ಕೂಟ ಪ್ರಜಾಪ್ರಭುತ್ವ. ಭಾರತ ಸಂವಿಧಾನದ ಭಾಗ 15ರಲ್ಲಿ ಪ್ರತಿಪಾದಿಸಿರುವ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ತತ್ವವು ಈ ಪ್ರಜಾಪ್ರಭುತ್ವದ ಆತ್ಮ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನು ಉಂಟು ಮಾಡುತ್ತದೆ.

ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳು ಅವುಗಳದ್ದೇ ಆದ ಅಧಿಕಾರ ಅವಧಿಗಳನ್ನು ಹೊಂದಿರುತ್ತವೆ ಮತ್ತು ಏಕರೂಪ ಚುನಾವಣಾ ವೇಳಾಪಟ್ಟಿಯು ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚಾಗಿ ಗಮನಹರಿಸುವ ಮತ್ತು ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು. ಏಕಕಾಲದಲ್ಲಿ ನಡೆಸುವ ಚುನಾವಣೆಯಲ್ಲಿ ಭದ್ರತೆ, ಚುನಾವಣಾ ಸಿಬ್ಬಂದಿ, ಮತದಾರರ ಬೇಸರ, ಆರ್ಥಿಕ, ಸಾಮಾಜಿಕ ಅಡೆತಡೆಯಂತಹ ಗಂಡಾಂತರ ಎದುರಾಗಲಿವೆ. ದೇಶದ ಒಕ್ಕೂಟದ ಸಮಗ್ರತೆಯನ್ನು ರಕ್ಷಿಸಲು ಈ ಕಠೋರ ನೀತಿಯನ್ನು ಅನುಷ್ಠಾನಗೊಳಿಸಬಾರದು’ ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.'

ಕೇಂದ್ರದ ಬುಡಕಟ್ಟು ಅಧಿನಿಯಮಕ್ಕೆ ತಿದ್ದುಪಡಿಗೆ ಒತ್ತಾಯ:ಅರಣ್ಯ ಇಲಾಖೆ ವತಿಯಿಂದ ನಿರ್ಣಯ ಮಂಡಿಸಿದ ಸಚಿವ ಈಶ್ವರ್‌ ಖಂಡ್ರೆ, ‘ಕೇಂದ್ರ ಸರ್ಕಾರವು 2005ಕ್ಕೆ ಮೊದಲು ಅರಣ್ಯದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರಿಗೆ ರಕ್ಷಣೆ ನೀಡಲು ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ ಜಾರಿಗೆ ತಂದಿದೆ. ಇದರಲ್ಲಿ ಬುಡಕಟ್ಟು ಜನರಿಗೆ ಮಾತ್ರವಲ್ಲದೆ ಇತರೆ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿಸಲು ವಿಧೇಯಕವನ್ನು ಸಮರ್ಪಕವಾಗಿ ಮಾರ್ಪಾಡು ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ನಿರ್ಣಯ ತರಲಾಗಿದೆ’ ಎಂದು ಹೇಳಿದರು. ಈ ನಿರ್ಣಯವು ಉಭಯ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತು.