ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

| Published : Feb 13 2024, 12:46 AM IST

ಸಾರಾಂಶ

ಈ ರೈಲು ವಿಸ್ತರಣೆಯಿಂದ ಪ್ರತಿನಿತ್ಯ ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಹೊಸಪೇಟೆ: ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ- ಗುಂತಕಲ್‌ ರೈಲು ಇದೀಗ ಮತ್ತೆ ಗುಂತಕಲ್‌ವರೆಗೆ ಸಂಚರಿಸಲಿದೆ.

ಈ ಹಿಂದೆ ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ- ಗುಂತಕಲ್‌ ನಡುವೆ ಸಂಚರಿಸುತ್ತಿದ್ದ(ಗಾಡಿ ಸಂಖ್ಯೆ: ೦೭೩೩೭/ ೦೭೩೩೮ ) ಪ್ಯಾಸೆಂಜರ್ ರೈಲು ಕಳೆದ ಆರು ತಿಂಗಳಿಂದ ತೋರಣಗಲ್ಲುವರೆಗೆ ಮಾತ್ರ ಸಂಚರಿಸುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ರೈಲನ್ನು ಮೊದಲಿನಂತೆ ಬಳ್ಳಾರಿ ಇಲ್ಲವೇ ಗುಂತಕಲ್‌ವರೆಗೆ ಪುನರಾರಂಭಿಸಬೇಕು ಎಂದು ಫೆ. 9ರಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿತ್ತು. ಇದಕ್ಕೆ ಸ್ಪಂದಿಸಿ ಫೆ. 12ರಿಂದ ಈ ರೈಲನ್ನು ತಾತ್ಕಾಲಿಕವಾಗಿ ಮೊದಲಿನಂತೆ ಗುಂತಕಲ್‌ವರೆಗೆ ವಿಸ್ತರಿಸಲಾಗಿದೆ.

ಈ ರೈಲು ವಿಸ್ತರಣೆಯಿಂದ ಪ್ರತಿನಿತ್ಯ ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ರೈಲು ಪ್ಯಾಸೆಂಜರ್ ಆಗಿರುವುದರಿಂದ ಹೊಸಪೇಟೆಯಿಂದ- ಬಳ್ಳಾರಿಗೆ ₹20 ಮತ್ತು ಗುಂತಕಲ್‌ಗೆ ₹35 ಹಾಗೂ ಹುಬ್ಬಳ್ಳಿಗೆ ₹35 ದರ ನಿಗದಿಪಡಿಸಲಾಗಿದೆ. ಈ ರೈಲು ಪ್ರತಿದಿನ ಹುಬ್ಬಳ್ಳಿಯಿಂದ ಬೆಳಗ್ಗೆ 7.45ಕ್ಕೆ ನಿರ್ಗಮಿಸಿ ಹೊಸಪೇಟೆಗೆ 11 ಗಂಟೆಗೆ, ಬಳ್ಳಾರಿ 12:20, ಗುಂತಕಲ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2.40ಕ್ಕೆ ನಿರ್ಗಮಿಸಿ ಬಳ್ಳಾರಿ ಮಧ್ಯಾಹ್ನ 3.45, ಹೊಸಪೇಟೆಗೆ ಸಂಜೆ 5.15ಕ್ಕೆ ಆಗಮಿಸಿ ಹುಬ್ಬಳ್ಳಿಯನ್ನು ರಾತ್ರಿ 9.30ಕ್ಕೆ ತಲುಪುತ್ತದೆ. ಬಳ್ಳಾರಿ- ಗುಂತಕಲ್- ಗದಗ- ಹುಬ್ಬಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರು ಕಡಿಮೆ ದರದ ಈ ರೈಲಿನ ಸೌಲಭ್ಯ ಬಳಸಿಕೊಳ್ಳಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್‌ ಕುಡತಿನಿ ತಿಳಿಸಿದ್ದಾರೆ.