ರಾಜಧಾನಿಗೆ ವಾಪಸ್ಸಾಗಲು ಬಸ್ಸಿಗಾಗಿ ಪ್ರಯಾಣಿಕರ ಪರದಾಟ

| Published : Apr 29 2024, 01:30 AM IST

ರಾಜಧಾನಿಗೆ ವಾಪಸ್ಸಾಗಲು ಬಸ್ಸಿಗಾಗಿ ಪ್ರಯಾಣಿಕರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿರುವುದರಿಂದ ಪುರುಷರಿಗಿಂತ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಾಗಿ ಕಾಯ್ದು ನಿಂತಿದ್ದರು. ಪಟ್ಟಣದ ಟಿ.ಮರಿಯಪ್ಪ ವೃತ್ತದ ಬಸ್ ನಿಲುಗಡೆ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣವಿದೆಯಾದರೂ ಸ್ವಲ್ಪ ಯಾಮಾರಿದರೆ ಬಸ್‌ನಲ್ಲಿ ಸೀಟು ಸಿಗುವುದಿಲ್ಲವೆಂಬ ಕಾರಣಕ್ಕೆ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುಡು ಬಿಸಿಲಿನಲ್ಲಿಯೇ ಗಂಟೆ ಗಟ್ಟೆಲೆ ಕಾಯ್ದು ಬೆಂಗಳೂರು ಕಡೆಗೆ ಸಂಚರಿಸಲು ಬಸ್ ಬಂದ ತಕ್ಷಣ ನೂಕು ನುಗ್ಗಲಿನಲ್ಲಿ ಬಸ್ ಹತ್ತುವಂತಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬಂದಿದ್ದ ತಾಲೂಕಿನ ಬೆಂಗಳೂರು ನಿವಾಸಿಗಳು, ಭಾನುವಾರ ವಾಪಸ್ ತೆರಳಲು ಸಾರಿಗೆ ಬಸ್‌ಗಾಗಿ ದಿನವಿಡೀ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಯಾವುದೇ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬೆಂಗಳೂರಿನಲ್ಲಿ ನೆಲೆಸಿರುವ ತಾಲೂಕಿನ ಮತದಾರರು ತಮ್ಮ ಹಕ್ಕು ಚಲಾಯಿಸುವ ಸಲುವಾಗಿ ಶುಕ್ರವಾರ ಸ್ವಗ್ರಾಮಗಳಿಗೆ ಬಂದಿದ್ದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ರಜೆ ಇತ್ತು.

ಇದ್ದರಿಂದ ತಮ್ಮ ಕೆಲಸ- ಕಾರ್ಯಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ತೆರಳಲು ಭಾನುವಾರ ಮಧ್ಯಾಹ್ನದಿಂದ ಪಟ್ಟಣದಲ್ಲಿ ಸಾರಿಗೆ ಬಸ್‌ಗಾಗಿ ಕಾಯ್ದು ಕುಳಿತಿದ್ದರು. ಆದರೆ, ನಿಗದಿತ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳೊಂದಿಗೆ ಸುಡಿಬಿಸಿಲಿನಲ್ಲಿಯೇ ರಸ್ತೆ ಬದಿಯಲ್ಲಿ ನಿಂತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿರುವುದರಿಂದ ಪುರುಷರಿಗಿಂತ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಾಗಿ ಕಾಯ್ದು ನಿಂತಿದ್ದರು. ಪಟ್ಟಣದ ಟಿ.ಮರಿಯಪ್ಪ ವೃತ್ತದ ಬಸ್ ನಿಲುಗಡೆ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣವಿದೆಯಾದರೂ ಸ್ವಲ್ಪ ಯಾಮಾರಿದರೆ ಬಸ್‌ನಲ್ಲಿ ಸೀಟು ಸಿಗುವುದಿಲ್ಲವೆಂಬ ಕಾರಣಕ್ಕೆ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುಡು ಬಿಸಿಲಿನಲ್ಲಿಯೇ ಗಂಟೆ ಗಟ್ಟೆಲೆ ಕಾಯ್ದು ಬೆಂಗಳೂರು ಕಡೆಗೆ ಸಂಚರಿಸಲು ಬಸ್ ಬಂದ ತಕ್ಷಣ ನೂಕು ನುಗ್ಗಲಿನಲ್ಲಿ ಬಸ್ ಹತ್ತುವಂತಾಯಿತು.

ತಾಲೂಕಿನ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್‌ನಲ್ಲಿಯೂ ಕೂಡ ಭಾನುವಾರ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಬೆಂಗಳೂರಿಗೆ ತೆರಳಲು ಬಸ್‌ಗಾಗಿ ಕಾಯ್ದು ನಿಂತಿದ್ದರಾದರೂ ಹಾಸನ ಕಡೆಗಳಿಂದ ಬರುತ್ತಿದ್ದ ಎಲ್ಲಾ ಬಸ್‌ಗಳು ಭರ್ತಿಯಾಗಿದ್ದವು. ಕೆಲ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡರೆ ಇನ್ನೂ ಕೆಲ ಬಸ್‌ಗಳು ನಿಲುಗಡೆಗೊಳಿಸದೇ ತೆರಳುತ್ತಿದ್ದವು.

ತಾಲೂಕಿನ ಬಹುತೇಕ ಜನರು ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ನೆಲೆಸಿರುವುದು, ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿರುವ ವಿಚಾರ. ಮತದಾನ ಮಾಡಲು ಬಂದಿದ್ದ ನಾವು ಮತ್ತೆ ವಾಪಸ್ ಬೆಂಗಳೂರಿಗೆ ತೆರಳಲು ಇಷ್ಟೊಂದು ತೊಂದರೆ ಅನುಭವಿಸಬೇಕೇ? ಎರಡು ಗಂಟೆ ಕಾಲ ಸುಡು ಬಿಸಿಲಿನಲ್ಲಿಯೇ ಮಕ್ಕಳೊಂದಿಗೆ ರಸ್ತೆ ಬದಿಯಲ್ಲಿ ನಿಲ್ಲುವಂತಾಗಿದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು? ಇಂತಹ ಸಂದರ್ಭದಲ್ಲಾದರೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿದರೆ ಇಲಾಖೆಗೆ ನಷ್ಟವಾಗುವುದಿಲ್ಲ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದರು.