ಅಖಂಡ ಭಾರತ ನಿರ್ಮಾಣದಲ್ಲಿ ಪಟೇಲ್‌ ಪಾತ್ರ ಹಿರಿದು: ಡಾ. ಪರಶುರಾಮ ಬಾರ್ಕಿ

| Published : Nov 01 2025, 02:15 AM IST

ಸಾರಾಂಶ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರದ ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏಕತಾ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು.

ಲಕ್ಷ್ಮೇಶ್ವರ: ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆ ಕಾಪಾಡಿದ ಹಾಗೂ ತಮ್ಮ ಕಾರ್ಯಗಳ ಮೂಲಕವೇ ಒಗ್ಗಟ್ಟನ್ನು ಎತ್ತಿ ಹಿಡಿದ ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಜೀವನ ಮತ್ತು ಆದರ್ಶಗಳು ಸರ್ವಕಾಲಕ್ಕೂ ಆದರ್ಶಪ್ರಾಯ ಮತ್ತು ಅನುಕರಣೀಯ ಎಂದು ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಏಕತಾ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 1947ರ ಸ್ವಾತಂತ್ರ್ಯಾನಂತರ ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಅಖಂಡ ಭಾರತ ದೇಶ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಹಿರಿದಾಗಿದೆ. ದೇಶದ ಏಕತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.

ಏಕತಾ ದಿವಸ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ ಸ್ಪರ್ಧೆ, ನಿಬಂಧ ಸ್ಪರ್ಧೆ, ಸಮೂಹ ಗೀತೆ ಸ್ಪರ್ಧೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕಾಲೇಜಿನ ಆಡಳಿತ ಅಧಿಕಾರಿ ಪ್ರೊ. ವಿಕ್ರಂ ಶಿರೋಳ, ಡಾ. ಆರ್.ಎಂ. ಪಾಟೀಲ, ಡಾ. ಸುಭಾಷ್ ಮೇಟಿ, ಎನ್ಎಸ್ಎಸ್ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ, ರವಿಪ್ರಕಾಶ ಉಪಸ್ಥಿತರಿದ್ದರು.

ದೇಶದ ಏಕತೆಗಾಗಿ ಹೋರಾಡಿದ ಪಟೇಲ್

ಗಜೇಂದ್ರಗಡ: ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ರೋಣ ಮಂಡಲ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ದೇಶದ ಏಕತೆಗಾಗಿ ಹೋರಾಡಿದ ಪಟೇಲ್ ಅವರ ಕೊಡುಗೆ ಅವಿಸ್ಮರಣೀಯ. ಅವರ ಆದರ್ಶ ಮತ್ತು ದೇಶಪ್ರೇಮವನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ‍್ಯ ನಂತರವು ವಿವಿಧ ರಾಜರ ಆಡಳಿತದ ಹಿಡಿತದಲ್ಲಿದ್ದ ಅನೇಕ ಪ್ರದೇಶಗಳನ್ನು ಒಂದುಗೂಡಿಸಿ ದೇಶದ ಏಕೀಕರಣಕದ ರೂವಾರಿಗಳಾದ ಅವರನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ಅತ್ಯಂತ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಮಾಡಿ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.

ಉಮೇಶ ಮಲ್ಲಾಪುರ, ರಾಮಣ್ಣ ಚವ್ಹಾಣ, ಬಾಲಾಜಿರಾವ ಭೋಸಲೆ, ರಾಜೇಂದ್ರ ಘೋರ್ಪಡೆ, ರಮೇಶ ವಕ್ಕರ, ಮುದಿಯಪ್ಪ ಕರಡಿ, ಮಹಾಂತೇಶ ಪೂಜಾರ, ಬದರಿನಾಥ ಜೋಶಿ, ಶಂಕರಪ್ಪ ಗುರಿಕಾರ, ಅಶೋಕ ಮಾದರ ಇದ್ದರು.