ಕನ್ನಡಪ್ರಭ ವಾರ್ತೆ, ಸಕಲೇಶಪುರ

ಯಾವುದೇ ಸಂಘವನ್ನು ಮುನ್ನಡೆಸುವರು ತಾಳ್ಮೆ ಹಾಗೂ ಆಲಿಸುವ ಮನೋಭಾವನೆಯನ್ನು ಹೊಂದಿರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಬೇರೆಲ್ಲಾ ತಾಲೂಕುಗಳಿಗಿಂತ ತಾಲೂಕಿನ ಶಿಕ್ಷಕರು ಮಾದರಿ ಶಿಕ್ಷಕರಾಗಿದ್ದಾರೆ. ತಾಲೂಕಿನ ಶಿಕ್ಷಕರು ಯಾವುದೆ ಗೊಂದಲಗಳನ್ನು ಸೃಷ್ಟಿ ಮಾಡುವುದಿಲ್ಲ. ಯಾವುದೇ ಸಂಘಟನೆ ಇರಲಿ ಅದನ್ನು ಮುನ್ನಡೆಸುವವರಿಗೆ ತಾಳ್ಮೆ ಅತ್ಯಂತ ಮುಖ್ಯ, ತಾಳ್ಮೆ ಇಲ್ಲದಿದ್ದಲ್ಲಿ ಸಂಘಟನೆ ಮುನ್ನಡೆಸುವುದು ಅಸಾಧ್ಯ, ತಾಳ್ಮೆಯ ಜೊತೆಗೆ ಆಲಿಸುವ ಮನೋಭಾವನೆ ಸಹ ಅತಿ ಅಗತ್ಯ. ಇದರಿಂದ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ, ನೂತನ ಪದಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಲಿ ಎಂದರು. ತಾಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಿರ್ಮಾಣ ಮಾಡುವ ಶಿಕ್ಷಕ ವೃತ್ತಿ ಅತ್ಯಂತ ಗೌರವಾಯುತವಾದ ವೃತ್ತಿಯಾಗಿದ್ದು ಆದರೆ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಶಿಕ್ಷಕರ ಸಮಸ್ಯೆ ಹೆಚ್ಚಿದ್ದು ಕಾಡಾನೆ ಸಮಸ್ಯೆ, ಗುಡ್ಡಗಾಡು ಪ್ರದೇಶ, ಅತಿ ಮಳೆ ಸಮಸ್ಯೆ, ಸೇರಿ ಹಲವಾರು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾನು ಹಾಗೂ ನಮ್ಮ ತಂಡ ಶಿಕ್ಷಕರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆಂದು ನಿಮಗೆ ಆಹ್ವಾಸನೆ ಕೊಡುತ್ತೇನೆ. ಚುನಾವಣೆಯಲ್ಲಿ ನಮ್ಮ ಪರ ಮತದಾನ ಮಾಡಿದ ಎಲ್ಲರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ. ಶಿಕ್ಷಕರ ಬಹುದಿನದ ಕನಸಾದ ಗುರುಭವನ ನಿರ್ಮಾಣ, ಹಾಗೂ ಶಿಕ್ಷಕರಿಗಾಗಿ ಹಲವು ಕಾರ್ಯಕ್ರಮಗಳನ್ನು ನಮ್ಮ ಸಂಘದ ವತಿಯಿಂದ ಆಯೋಜಿಸುತ್ತೇವೆ ಹಾಗೂ ಎಲ್ಲಾ ಶಿಕ್ಷಕರನ್ನು ಒಟ್ಟಾಗಿ ಸಮಾನತೆಯಿಂದ ನೋಡುತ್ತೇವೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್, ಉಪಾಧ್ಯಕ್ಷರಾಗಿ ಶಶಿ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಆನೆಮಹಲ್, ಖಚಾಂಚಿಯಾಗಿ ವೇಣುಗೋಪಾಲ್ ಅಧಿಕಾರ ಸ್ವೀಕರಿಸಿದರು.ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಾಂತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಹಾಗೂ ಸಂಘಟನಾ ಕಾರ್ಯದರ್ಶಿ ತಮ್ಮಣ್ಣ ಶೆಟ್ಟಿ, ಕಾರ್ಯದರ್ಶಿ ಜಗದೀಶ್, ಬಿ.ಆರ್.ಸಿ ಗಂಗಾಧರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸುಧೀರ್ ಎಸ್.ಎಲ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ , ತಾಲೂಕು ಎಸ್.ಸಿ/ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಕೀರ್ತಿಕುಮಾರ್, ವಿವಿಧ ಶಿಕ್ಷಕರ ಸಂಘದ ಮುಖಂಡರಾದ ಮಲ್ಲೇಶ್, ಕುಮಾರ, ಮಂಜುನಾಥ್, ಉಮಾದೇವಿ, ಮಂಜುಲಾ, ಸಿದ್ದೇಶ್, ರೇಣುಕಾ, ದೇವಕಿ, ಜಗದೀಶ್ ಪ್ರಸಾದ್, ಸೇರಿದಂತೆ ಇತರರು ಹಾಜರಿದ್ದರು.