ರೋಗಿ ಸಾವು: ಮೂಡಿಗೆರೆ ಪಟ್ಟಣದಲ್ಲಿ ಸಾರ್ವಜನಿಕರ ಪ್ರತಿಭಟನೆ

| Published : Nov 14 2024, 12:46 AM IST

ರೋಗಿ ಸಾವು: ಮೂಡಿಗೆರೆ ಪಟ್ಟಣದಲ್ಲಿ ಸಾರ್ವಜನಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ ಚಿಕಿತ್ಸೆಗೆಂದು ಎಂಜಿಎಂ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಚಿಕಿತ್ಸೆ ನೀಡದೆ ನಿರ್ಲಕ್ಷ್ಯ: ಗುತ್ತಿ ಗ್ರಾಮದ ಮೃತ ಸುಂದರೇಶ್ ಕುಟುಂಬದ ಆರೋಪ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಚಿಕಿತ್ಸೆಗೆಂದು ಎಂಜಿಎಂ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.ಚಿಕಿತ್ಸೆಗೆಂದು ಬಂದಿದ್ದ ತಾಲೂಕಿನ ಗುತ್ತಿ ಗ್ರಾಮದ ಸುಂದರೇಶ್ (31) ಮೃತಪಟ್ಟಿದ್ದು, ವೈದ್ಯಾಧಿಕಾರಿ ಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.ಮೃತ ಸುಂದರೇಶ್ ಪತ್ನಿ ರೇಣುಕಾ ಮಾತನಾಡಿ, ಪತಿಗೆ ಬೆಳಿಗ್ಗೆ 4 ಗಂಟೆಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡು ಅಸ್ವಸ್ಥರಾದಾಗ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು ಎಂದರು.ಆಸ್ಪತ್ರೆ ಒಳಗೆ ಹೋಗಲು ವ್ಹೀಲ್ ಚೇರ್ ತರಲು ಸಿಬ್ಬಂದಿ ಬಳಿ ಕೇಳಿಕೊಂಡಾಗ ವ್ಹೀಲ್ ಚೇರ್ ತರಲಿಲ್ಲ. ಉಡಾಫೆಯಿಂದ ಪತಿ ಕುತ್ತಿಗೆ ಪಟ್ಟಿ ಹಿಡಿದು ಆಸ್ಪತ್ರೆ ಒಳ ಭಾಗಕ್ಕೆ ದೂಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ದಾದಿಯೊಬ್ಬರು ಮಾತ್ರೆ ನೀಡಿ ಅದರಲ್ಲಿ ಒಂದನ್ನು ತನ್ನ ಪತಿಗೆ ಕುಡಿಸಿ ದ್ದಾರೆ. ಬೆಳಿಗ್ಗೆ 10 ಗಂಟೆವರೆಗೆ ವೈದ್ಯರಾಗಲಿ ಅಥವಾ ಸಿಬ್ಬಂದಿ ಯಾರೊಬ್ಬರೂ ತನ್ನ ಪತಿ ಬಳಿ ಬರಲಿಲ್ಲ. ಅಷ್ಟರಲ್ಲಿ ಅವರು ಮೃತಪಟ್ಟರು ಎಂದು ದೂರಿದರು.ವಿಷಯ ತಿಳಿದು ಆಸ್ಪತ್ರೆ ಬಳಿ ಜಮಾಯಿಸಿದ ಗ್ರಾಮಸ್ಥರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿ ವೈದ್ಯಾಧಿಕಾರಿ ಮತ್ತು ಉಡಾಫೆಯಿಂದ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮೃತ ದೇಹವನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಪಟ್ಟು ಹಿಡಿದಾಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಯಿತು.ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ ತಹಸೀಲ್ದಾರ್‌ ರಾಜಶೇಖರ್ ಮೂರ್ತಿ, ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ ತೋರಿದ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಡಳಿತಾಧಿಕಾರಿ ಡಾ.ಪ್ರಿಯಾಂಕ, ಹಿರಿಯ ವೈದ್ಯ ಡಾ. ಅನಂತಪದ್ಮನಾಭ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದರು.

ಸಿಸಿಟಿವಿ ಪರಿಶೀಲಿಸಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಪೋಟೋ ಫೈಲ್‌ ನೇಮ್‌ 13 ಕೆಸಿಕೆಎಂ 4ಚಿಕಿತ್ಸೆಗೆಂದು ಎಂಜಿಎಂ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.