ಮಹೇಶ ಛಬ್ಬಿಗದಗ: ರಾಜ್ಯದಲ್ಲಿಯೇ ಮಾದರಿ ಜಿಲ್ಲಾಸ್ಪತ್ರೆಗಳಲ್ಲಿ ಒಂದಾದ ಕೆ.ಎಚ್‌. ಪಾಟೀಲ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಲ್ಲಾ ಆಸ್ಪತ್ರೆ)ಗೆ ನಿತ್ಯ ಸಾವಿರಾರು ಜನರು ಚಿಕಿತ್ಸೆಗಾಗಿ ಬರುತ್ತಾರೆ. ವಾಪಸ್ ತಮ್ಮ ಊರುಗಳಿಗೆ ತೆರಳಲು ಬಸ್ಸಿಗಾಗಿ ಜಿಲ್ಲಾಸ್ಪತ್ರೆ ಬಳಿ ರಸ್ತೆಯಲ್ಲಿ ಬಿಸಿಲು ಮಳೆ ಎನ್ನದೇ ಕಾಯುವಂತಾಗಿದೆ.ಜಿಲ್ಲಾಸ್ಪತ್ರೆಗೆ ನಗರದಿಂದ ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ಆಸ್ಪತ್ರೆ ಕೂಗಳತೆ ದೂರದಲ್ಲಿರುವ ಪಾಳಾ- ಬಾದಾಮಿ ಮುಖ್ಯರಸ್ತೆಯಲ್ಲಿ ಬಸ್‌ ತಂಗುದಾಣ ಇಲ್ಲದೇ ನಿತ್ಯ ಜಿಮ್ಸ್‌ಗೆ ಬರುವ ಸಾವಿರಾರು ವಿದ್ಯಾರ್ಥಿಗಳು, ರೋಗಿಗಳು ರಸ್ತೆಯ ಮಧ್ಯದ ಡಿವೈಡರ್‌ ಮೇಲೆ ಸುಡು ಬಿಸಿಲಿನಲ್ಲಿ ಕುಳಿತು ಬಸ್ಸಿಗಾಗಿ ಕಾಯುವ ಸ್ಥಿತಿ ಇದೆ.ಅಪಘಾತದಲ್ಲಿ ಕೈಕಾಲು ಮುರಿದುಕೊಂಡು ಚಿಕಿತ್ಸೆ ಪಡೆದು ತಲೆಗೆ, ಕೈ ಕಾಲುಗಳಿಗೆ ಬ್ಯಾಂಡೇಜ್‌ ಸುತ್ತಿಕೊಂಡ ರೋಗಿಗಳು ತಾಸುಗಟ್ಟಲ್ಲೇ ಬಸ್ಸಿಗಾಗಿ ನೀರು, ನೆರಳಿಲ್ಲದೇ ರಸ್ತೆ ಮಧ್ಯದಲ್ಲಿ ಬಸ್ಸಿಗಾಗಿ ಕಾದು ಕುಳಿತಿರುವುದನ್ನು ಕಂಡ ಸಹ ಪ್ರಯಾಣಿಕರು ಮಮ್ಮಲ ಮರಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.ಅತ್ಯಾಧುನಿಕ ಸೌಲಭ್ಯಯುಳ್ಳ ಜಿಮ್ಸ್‌ ಆಸ್ಪತ್ರೆಗೆ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಗಡಿ ಭಾಗಗಳ ಗ್ರಾಮದವರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ವೈದ್ಯಕೀಯ ಶಿಕ್ಷಣ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ಮುಗಿಸಿ ತಮ್ಮ ಮನೆ, ಊರುಗಳಿಗೆ ತೆರಳಬೇಕಾದರೆ ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯಲೇಬೇಕು.ನಗರದಿಂದ ದೂರವಿರುವ ಜಿಲ್ಲಾಸ್ಪತ್ರೆಗೆ ನಗರ ಸಾರಿಗೆಯಿಂದ ಬಸ್‌ಗಳಿವೆ. ಅವು ಬೆರಳಣಿಕೆಯಷ್ಟು ಮಾತ್ರ. ರೋಗಿಗಳು, ಆಸ್ಪತ್ರೆ ಸಿಬ್ಬಂದಿ ತಮ್ಮ ಊರುಗಳಿಗೆ ತೆರಳಬೇಕೆಂದರೆ ಆಸ್ಪತ್ರೆ ಹತ್ತಿರವಿರುವ ಪಾಳಾ- ಬಾದಾಮಿ ಮುಖ್ಯರಸ್ತೆಗೆ ಬಂದು ನಿಲ್ಲಬೇಕು. ಅಲ್ಲಿ ತಾಸುಗಟ್ಟಲೇ ಬಸ್ಸಿಗಾಗಿ ಕಾದು ನಿಂತರೂ ಬಸ್‌ಗಳು ಇರುವುದಿಲ್ಲ. ಒಂದು ವೇಳೆ ಬಸ್‌ಗಳು ಬಂದರೂ ಮೊದಲೇ ಭರ್ತಿಯಾಗಿರುತ್ತವೆ. ಬಹುತೇಕ ಬಸ್‌ಗಳು ಇಲ್ಲಿ ನಿಲ್ಲಿಸದೇ ಹಾಗೇ ಮುಂದೆ ಹೋಗುತ್ತವೆ. ಬಸ್ಸಿಗಾಗಿ ಕಾದು ಕಾದು ಕೊನೆಗೆ ಆಟೋದಲ್ಲಿ ಗದಗ ನಗರಕ್ಕೆ ತೆರಳಬೇಕು. ರಾತ್ರಿ ಸಮಯದಲ್ಲಂತೂ ಬಸ್‌ಗಳನ್ನು ನಿಲ್ಲಿಸುವುದೇ ಇಲ್ಲ. ಖಾಸಗಿ ವಾಹನಗಳಿಗೆ ಕೈಮಾಡಿ ಊರು ಸೇರಬೇಕು ಎನ್ನುತ್ತಾರೆ ಸಾರ್ವಜನಿಕರು.ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆಸ್ಪತ್ರೆ ಬಳಿ ಬಸ್‌ ತಂಗುದಾಣ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸಾರ್ವಜನಿಕರು.

ಕ್ರಮ ಕೈಗೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಅವರು ಇತ್ತೀಚೆಗೆ ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್‌. ಪಾಟೀಲ ಅವರ 101ನೇ ಜಯಂತಿ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ಬಡರೋಗಿಗಳ ಕುಟುಂಬಸ್ಥರಿಗೆ ಕೇವಲ ₹5ಕ್ಕೆ ಆಹಾರ ನೀಡುವ ಬುತ್ತಿ ಕ್ಯಾಂಟೀನ್ ಆರಂಭಿಸಿದರು. ಅದೇ ರೀತಿ ಆಸ್ಪತ್ರೆ ಬಳಿ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಾದ ಚನ್ನಪ್ಪ ಬೇವಿನಕಟ್ಟಿ ತಿಳಿಸಿದರು.ಅನುಕೂಲ ಕಲ್ಪಿಸಿ: ನಿತ್ಯ ಜಿಮ್ಸ್(ಜಿಲ್ಲಾಸ್ಪತ್ರೆ)ಗೆ ಜಿಲ್ಲಾದ್ಯಂತ ಸಾವಿರಾರು ಜನರು ಚಿಕಿತ್ಸೆಗೆಂದು ಬರುತ್ತಾರೆ. ಚಿಕಿತ್ಸೆ ಪಡೆದು ವಾಪಸ್‌ ಊರಿಗೆ ತೆರಳಬೇಕಂದರೆ ಮುಖ್ಯ ರಸ್ತೆಯಲ್ಲಿಯೇ ಬಂದು ಬಸ್ಸಿಗಾಗಿ ಕಾದು ನಿಲ್ಲಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್‌ ತಂಗುದಾಣ ನಿರ್ಮಾಣ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರಾದ ರಾಘವೇಂದ್ರ ಯಳವತ್ತಿ ಆಗ್ರಹಿಸಿದರು.