ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಜೊತೆ ಕಾರ್ಯದರ್ಶಿಯಾಗಿ ಸ್ವರ್ಗೀಯ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ನಗರದ ಜನತಾ ಡಿಲಕ್ಸ್ (ಪತ್ತುಮುಡಿ) ಹೋಟೆಲ್ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಜೊತೆ ಕಾರ್ಯದರ್ಶಿಯಾಗಿ ಸ್ವರ್ಗೀಯ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ನಗರದ ಜನತಾ ಡಿಲಕ್ಸ್ (ಪತ್ತುಮುಡಿ) ಹೋಟೆಲ್ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, ರವಿಯಣ್ಣರದ್ದು ಸಜ್ಜನ ವ್ಯಕ್ತಿತ್ವ, ಧಾರ್ಮಿಕ ಕ್ಷೇತ್ರದಲ್ಲಿ ಸದಾ ನಿರಂತರ ತೊಡಗಿಸಿಕೊಂಡವರು. ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಹುಟ್ಟಿದ ವ್ಯಕ್ತಿಗೆ ಸಾವು ನಿಶ್ಚಿತ ಎಂಬ ಸತ್ಯವನ್ನು ಅರಿತು ನಾವು ಧೈರ್ಯ ಮಾಡಿಕೊಳ್ಳ ಬೇಕಾಗಿದೆ. ಅವರ ಸಾವು ಪಟ್ಲ ಫೌಂಡೇಶನ್ ಟ್ರಸ್ಟ್‌ಗೆ ತುಂಬಲಾರದ ನಷ್ಟ ಎಂದರು.

ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ಸಹೃದಯಿ, ನಿಷ್ಕಲ್ಮಶ, ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ರವಿಚಂದ್ರ ಶೆಟ್ಟಿ ಅಶೋಕನಗರ ಅವರು ತನ್ನ‌ ಜವಾಬ್ದಾರಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ವ್ಯಕ್ತಿ. ಯಾವ ಕೆಲಸಕ್ಕೆ ಕೈ ಹಾಕಿದರೂ ಚಿನ್ನದ ಸ್ಪರ್ಶದ ವ್ಯಕ್ತಿತ್ವ ಅವರದಾಗಿತ್ತು. ಅವರ ಜೀವನ ಶೈಲಿ ಪ್ರತಿಯೊಬ್ಬರ ಹೃದಯ ತಟ್ಟುವಂತದ್ದು ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಕಟೀಲು ಘಟಕದ ಅಧ್ಯಕ್ಷ ಗಿರೀಶ್ ಎಂ ಶೆಟ್ಟಿ ಕಟೀಲು, ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಸುರತ್ಕಲ್ ಘಟಕದ ಅಧ್ಯಕ್ಷ ಲೀಲಾಧರ ಶೆಟ್ಟಿ ಕಟ್ಲ, ಬಂಟ್ಸ್ ಹಾಸ್ಟೇಲ್ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪಡುಬಿದ್ರೆ ಘಟಕದ ಜಯ ಶೆಟ್ಟಿ ಪದ್ರ, ಸರಪಾಡಿ ಘಟಕದ ಅಶೋಕ ಶೆಟ್ಟಿ ಸರಪಾಡಿ, ಡಾ ಬಾಲಚಂದ್ರ ಶೆಟ್ಟಿ ಸರಪಾಡಿ, ಬೆಳ್ತಂಗಡಿ ಘಟಕದ ಭುಜಬಲಿ ಪ್ರಸಾದ್ ಧರ್ಮಸ್ಥಳ, ವಿಟ್ಲ ಘಟಕದ ಪೂವಪ್ಪ ಶೆಟ್ಟಿ ಅಳಿಕೆ ಅನಿತಾ ಪಿಂಟೊ, ಉರ್ವಾ ಅಶೋಕನಗರ ಬಂಟರ ಸಂಘದ ಕೋಶಾಧಿಕಾರಿ ಜೆ ವಿ ಶೆಟ್ಟಿ, ಕೆಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪುಟ್ಟಸ್ವಾಮಿ, ಪಾವಂಜೆ ಮೇಳದ ಪ್ರಬಂಧಕ ಮಾಧವ ಡಿ.ಬಂಗೇರ ಕೊಳತ್ತಮಜಲು ಮತ್ತಿತರರು ನುಡಿ ನಮನ ಸಲ್ಲಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.