ಸಾರಾಂಶ
-ಪಿಯು ಉಪನ್ಯಾಸಕರಿಗೆ ನಡೆದ ಮಾಹಿತಿ ಶಿಬಿರದಲ್ಲಿ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ
------ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡುವುದಲ್ಲದೆ ಮಾನಸಿಕವಾಗಿ ಸದೃಢವಾಗಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ತಿಳಿಸಿದರು.ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ಪಿಯು ಕಾಲೇಜು ಉಪನ್ಯಾಸಕರಿಗೆ ನಡೆದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಜೀವನದಲ್ಲಿ ಶಿಸ್ತು, ಶಾಂತಿ ಮೈಗೂಡಿಸಿಕೊಳ್ಳಲು ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಣ ಸಹಕಾರಿಯಾಗಲಿದೆ. ಜಿಲ್ಲೆಯ ಪ್ರತಿ ಪಿಯು ಕಾಲೇಜಿನಲ್ಲಿ ರೋವರ್ ಅಂಡ್ ರೇಂಜರ್ ಘಟಕ ತೆರೆಯಲು ಸಹಕಾರ ನೀಡುತ್ತೇನೆ. ಚಿತ್ರದುರ್ಗವನ್ನು ಒಂದು ಮಾದರಿ ಜಿಲ್ಲೆಯಾಗಿಸುವಲ್ಲಿ ಎಲ್ಲರೂ ಸೇರಿ ಪಣ ತೊಡೋಣ ಎಂದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋವರ್ ಮತ್ತು ರೇಂಜರ್ ಘಟಕಗಳು ಆರಂಭವಾಗಬೇಕು. ಯುವ ಜನಾಂಗದಲ್ಲಿ ಸಂಸ್ಕೃತಿ, ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಬೇಕಿದೆ ಎಂದು ಹೇಳಿದರು.ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಪರಮೇಶ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ರೋವರ್ ಮತ್ತು ರೇಂಜರ್ ಘಟಕಗಳನ್ನು ಕಡ್ಡಾಯ ತೆರೆಯಬೇಕು. ಯುವ ಜನಾಂಗ ಮೊಬೈಲ್ ಗೀಳಿಗೆ ಸಿಲುಕಿದ್ದು, ದೇಶಾಭಿಮಾನ, ಶಾಂತಿ, ಶಿಸ್ತು ಮರೆಯುತ್ತಿದ್ದಾರೆ. ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಕೆ.ರವಿಶಂಕರ್ ರೆಡ್ಡಿ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೈಡ್ಸ್ ಆಯುಕ್ತ ಸವಿತಾ ಶಿವಕುಮಾರ್, ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಜಿಲ್ಲಾ ಸಂಘಟಕರಾದ ಕೆ.ಟಿ.ಮಲ್ಲೇಶಪ್ಪ, ಸಿ.ರವಿ, ಜಿಲ್ಲಾ ಸ್ಥಾನಿಕ ಆಯುಕ್ತ ಅನಂತರೆಡ್ಡಿ ಹೆಚ್.ಟಿ.ತಿಪ್ಪೇಸ್ವಾಮಿ ಹಾಜರಿದ್ದರು. ಶಿಬಿರದ ನಾಯಕತ್ವವನ್ನು ನರೇಂದ್ರಕುಮಾರ್ ವಹಿಸಿದ್ದರು.-------ಪೋಟೋ: ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಕಚೇರಿಯಲ್ಲಿ ಪಿಯು ಕಾಲೇಜು ಉಪನ್ಯಾಸಕರಿಗೆ ನಡೆದ ಮಾಹಿತಿ ಶಿಬಿರವನ್ನು ಆರ್.ಪುಟ್ಟಸ್ವಾಮಿ ಉದ್ಘಾಟಿಸಿದರು.
--------ಪೋಟೋ: 11 ಸಿಟಿಡಿ2