ಸಾರಾಂಶ
ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಮೂಲಕ ಯುವಕರಲ್ಲಿ ಬಲವಾದ ದೇಶಪ್ರೇಮ ಬೆಳೆಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.
ಹಾನಗಲ್ಲ: ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಮೂಲಕ ಯುವಕರಲ್ಲಿ ಬಲವಾದ ದೇಶಪ್ರೇಮ ಬೆಳೆಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.
ಹಾನಗಲ್ಲಿನ ಗುರುಭವನದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಯೋಜನಾ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ಎಲ್ಲ ಶಿಕ್ಷಕರೂ ಸಂಘಟಿತರಾಗಿ ಸ್ಕೌಟ್-ಗೈಡ್ಸ್ ತಂಡಗಳನ್ನು ರಚಿಸಿ, ರಾಷ್ಟ್ರೀಯ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸವಾಗಬೇಕು. ಈ ಮೂಲಕ ಶಿಸ್ತು, ಸಮಯಪ್ರಜ್ಞೆ, ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ನೆರೆ-ಬರ ಸೇರಿದಂತೆ ವಿವಿಧ ಸಂಕಷ್ಟ ಸಮಯದಲ್ಲಿ ಕಷ್ಟಕ್ಕೊಳಗಾದವರ ಸಹಾಯಕ್ಕೆ ನಿಲ್ಲುವ ಪರೋಪಕಾರದ ಗುಣ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳಲ್ಲಿ ಧೈರ್ಯ ಸಾಹಸದ ಶಕ್ತಿ ತುಂಬಬೇಕು ಎಂದರು.ಸ್ಕೌಟ್-ಗೈಡ್ಸ್ ತಾಲೂಕು ಆಯುಕ್ತೆ ನಂದಿನಿ ವಿರೂಪಣ್ಣನವರ ಮಾತನಾಡಿ, ಮಕ್ಕಳನ್ನು ಕ್ರಿಯಾಶೀಲರಾಗಿ ಬೆಳೆಸುವ ಅತ್ಯುತ್ತಮ ಯೋಜನೆ ಇದಾಗಿದೆ. ಕೇವಲ ಪಾಠಕ್ಕೆ ಮಕ್ಕಳನ್ನು ಸೀಮಿತಗೊಳಿಸದೆ ಆಟ-ಪಾಠಗಳೆರಡರಲ್ಲೂ ಸಮ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹಿಸಿ. ಸಾಂಸ್ಕೃತಿಕ ಮನಸ್ಸು ಮಕ್ಕಳಲ್ಲಿ ಜಾಗ್ರತವಾದರೆ ನೀತಿವಂತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಈ ಮೂಲಕ ಒಳ್ಳೆಯ ತರಬೇತಿ ನೀಡಿ ದೇಶ ಭಕ್ತಿಯನ್ನು ಜಾಗ್ರತಗೊಳಿಸಿ ಎಂದು ಕರೆ ನೀಡಿದರು.
ಸ್ಕೌಟ್-ಗೈಡ್ಸ್ ಕಾರ್ಯದರ್ಶಿ ಪಿ.ಆರ್. ಚಿಕ್ಕಳ್ಳಿ ವಾರ್ಷಿಕ ಯೋಜನೆ ಹಾಗೂ ವಾರ್ಷಿಕ ಲೆಕ್ಕಪತ್ರಗಳ ಕುರಿತು ಮಾಹಿತಿ ನೀಡಿದರು. ಸ್ಕೌಟ್ ಮತ್ತು ಗೈಡ್ಸ್ ಮಾರ್ಗದರ್ಶಿ ಶಿಕ್ಷಕರಾದ ಶೋಭಾ ಪಾಟೀಲ, ಸಂತೋಷ ದೊಡ್ಡಮನಿ, ಎನ್.ಆರ್. ಗಾಳಿ, ರೇಖಾ ಕಲಾಲ, ರತ್ನ ತಳವಾರ, ರಮೇಶ ಹರಬಾಳ, ಕೆ.ಟಿ. ಮಲ್ಲೇಶಪ್ಪ, ಬಿ.ಎಂ. ದಿಡಗೂರ, ಆರ್.ಬಿ. ರೆಡ್ಡಿ, ಕೆ.ಟಿ. ಪಾಟೀಲ ಇದ್ದರು.