ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ದೇವಿಪುರ ಗ್ರಾಮದಲ್ಲಿ ಗ್ರಾಮ ದೇವತೆ ಪಟ್ಟಲದಮ್ಮ ಹಬ್ಬ ಎರಡು ದಿನಗಳ ಕಾಲ ಸಂಭ್ರಮದಿಂದ ಭಕ್ತಿ ಪ್ರಧಾನವಾಗಿ ನಡೆಯಿತು.ಹಬ್ಬದ ಹಿನ್ನೆಲೆಯಲ್ಲಿ ಶಕ್ತಿ ದೇವತೆ ಪಟ್ಟಲದಮ್ಮ ದೇವಿಗೆ ಶುಕ್ರವಾರದಿಂದಲೇ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದು ಗ್ರಾಮದ ಸುತ್ತಮುತ್ತಲ ರೈತರು ರಾಸುಗಳಿಗೆ ಹೂವಿನಿಂದ ಅಲಂಕೃತಗೊಳಿಸಿ ಕೊಂಡಕ್ಕೆ ಮೆರವಣಿಗೆ ಮೂಲಕ ಸೌದೆಯನ್ನು ದೇವಸ್ಥಾನ ಆವರಣಕ್ಕೆ ತಂದರು. ದಾರಿ ಉದ್ದಕ್ಕೂ ಕೊಂಡ ಬಂಡಿಗೆ ಮಹಿಳೆಯರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ಮಹಿಳೆಯರು ಚೌಡಕಟ್ಟೆಯಿಂದ ಮೀಸಲು ನೀರು ತಂದು ಪ್ರಸಾದ ತಯಾರಿಸಿ ಪಟ್ಟಲದಮ್ಮ ದೇವಿಗೆ ಹೆಡೆ ಅರ್ಪಿಸಿದರು. ಮಧ್ಯೆ ರಾತ್ರಿ ಪಟ್ಟಲದಮ್ಮ ದೇವಿ ವಿವಿಧ ಹೂಗಳಿಂದ ಆಲಂಕೃತಗೊಂಡ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾನಪದ ಕಲಾತಂಡದೊಂದಿಗೆ ತಂಬಿಟ್ಟಿನ ಅರತಿಯೊಂದಿಗೆ ಮೆರವಣಿಗೆ ಮೂಲಕ ಬಂದ ಕರಗಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ಶನಿವಾರ ಬೆಳಗಿನ ಜಾವ ದೇವಿ ಅರ್ಚಕ ನಿಂಗೇಗೌಡ ಕೊಂಡ ಹಾಯುವ ಮೂಲಕ ಪಟ್ಟಲದಮ್ಮ ಹಬ್ಬವನ್ನು ಯಶಸ್ವಿಗೊಳಿಸಿದರು. ಕೊಂಡ ನೋಡಲು ವಿವಿಧ ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹಬ್ಬದ ವಿಶೇಷವಾಗಿ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಚೌಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ಮಾಂಗಲ್ಯ ಭಾಗ್ಯ ಅಥವಾ ದೊಡ್ಡಮನೆ ಮಕ್ಕಳು ಎಂಬ ಸಾಮಾಜಿಕ ಹಾಸ್ಯಭರಿತ ನಾಟಕ ನಡೆಯಿತು.
ವಿಜೃಂಭಣೆಯಿಂದ ನಡೆದ ಉತ್ಸವಮಂಡ್ಯ:
ತಾಲೂಕಿನ ಮುದ್ದನಘಟ್ಟ ಗ್ರಾಮದಲ್ಲಿ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ಉತ್ಸವ ನಡೆಯಿತು.ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ಆಂಜನೇಯಸ್ವಾಮಿ, ಮಾರಮ್ಮ ದೇವಿ ಉತ್ಸವವನ್ನು ಏರ್ಪಡಿಸಲಾಗಿದೆ ಎಂದರು. ಸುತ್ತಮುತ್ತಲ ಗ್ರಾಮಸ್ಥರು ಈ ಹಬ್ಬದಲ್ಲಿ ಭಾಗವಹಿಸಿ ಗಮನ ಸೆಳೆದರು. ದೇವಾಲಯ ಮೂರ್ತಿಗಳನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಭಕ್ತಿ ಭಾವದಿಂದ ದೇವರ ದರ್ಶನ ಪಡೆದು ಪುನೀತರಾದರು.