ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೃಷಭ(ಬೇಶ ) ಮಾಸದ ಹತ್ತನೇ ದಿನ ತುಳು ಆಡುಮಾತಿನಲ್ಲಿ ಪತ್ತನಾಜೆ ಎಂದು ಪ್ರತೀತಿ. ಸಾಮಾನ್ಯವಾಗಿ ಮೇ ತಿಂಗಳ 24 ಅಥವಾ 25 ರಂದು ಪತ್ತನಾಜೆ ದಿನ ಹಿಂದೂ ಧಾರ್ಮಿಕ ದೈವ , ದೇವಸ್ಥಾನಗಳಲ್ಲಿ ವಿಶೇಷ ಉತ್ಸವ, ಸೇವೆಗಳು, ನೇಮಗಳು ನಡೆದು ದೇವರು ಒಳಗಾಗುವ ವರ್ಷದ ಮಹಾ ಪರ್ವದಿನ. ಅಂದಿನಿಂದ ಕಾರ್ತಿಕ ಮಾಸದ ದೀಪಾವಳಿ ವರೆಗೆ ದೈವ, ದೇವಸ್ಥಾನಗಳಲ್ಲಿ ಯಾವುದೇ ಜಾತ್ರೆ, ವಿಶೇಷ ಉತ್ಸವ, ಸೇವೆಗಳು, ನೇಮಗಳು ನಡೆಯುವುದಿಲ್ಲ. ಅಂದಿನಿಂದ ಮಳೆಗಾಲದ ಕೃಷಿ ಕಾರ್ಯಗಳು ಆರಂಭಗೊಳ್ಳುತ್ತವೆ. ಯಕ್ಷಗಾನ ತಿರುಗಾಟದ ಮೇಳಗಳು ಪ್ರದರ್ಶನ ಮುಕ್ತಾಯಗೊಳಿಸಿ ಕಲಾವಿದರು ಗೆಜ್ಜೆ ಕಳಚಿಡುವ ಅಪೂರ್ವ ಸುದಿನ.ಪತ್ತನಾಜೆಯಂದು (ಮೇ 24) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಉತ್ಸವ ಬಲಿ ಸಮಾಪನಗೊಳ್ಳುವ ದಿನ. ಅಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ವಿಶೇಷ ರಂಗಪೂಜೆ, ಉತ್ಸವ ಬಲಿ, ವಸಂತ ಪೂಜೆ ನಡೆದು ಧ್ವಜಮರ ಇಳಿಸುವ ವಿಧಿವಿಧಾನಗಳು ನಡೆದು ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ.
ಅಂದಿನಿಂದ ನಿತ್ಯನೈಮಿತ್ತಿಕ ಪೂಜೆ, ಸೇವೆಗಳ ಹೊರತು ಯಾವುದೇ ವಿಶೇಷ ಸೇವೆ, ಉತ್ಸವಗಳು ನಡೆಯುವುದಿಲ್ಲ. ಕಾರ್ತಿಕ ಮಾಸದ ದೀಪೋತ್ಸವದ ಬಳಿಕ ಮತ್ತೆ ಉತ್ಸವ, ಸೇವೆಗಳು ಆರಂಭಗೊಳ್ಳುತ್ತವೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪತ್ತನಾಜೆ ದಿನ ರಾತ್ರಿ ರಂಗಪೂಜೆ, ಬಲಿ ಉತ್ಸವ ನಡೆದು ದೇವರು ಒಳಗಾಗುತ್ತಾರೆ.ಬಹುತೇಕ ಎಲ್ಲ ಧಾರ್ಮಿಕ ದೇವಾಲಯಗಳಲ್ಲಿ ಪತ್ತನಾಜೆಯಂದು ದೇವರು ಗರ್ಭಗುಡಿ ಸೇರುವುದು ವಾಡಿಕೆ. ವಿವಿಧೆಡೆಗಳಲ್ಲಿ ದೈವಗಳಿಗೆ ವಾರ್ಷಿಕ ನೇಮ, ಭೋಗಾದಿಗಳು ನಡೆಯುತ್ತವೆ.
ಯಕ್ಷಗಾನ ಮೇಳದ ತಿರುಗಾಟ ಸಮಾಪ್ತಿ: ಪತ್ತನಾಜೆಯಂದು ಯಕ್ಷಗಾನ ಮೇಳಗಳ ವಾರ್ಷಿಕ ತಿರುಗಾಟ ಸಮಾಪ್ತಿಗೊಳ್ಳುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟ ಕೊನೆಗೊಂಡು ಮೇಳದ ಶ್ರೀ ಮಹಾಗಣಪತಿ ದೇವರನ್ನು ವೈಭವದ ಮೆರವಣಿಗೆಯಲ್ಲಿ ಪತ್ತನಾಜೆಯಂದು ಸಂಜೆ ಕ್ಷೇತ್ರಕ್ಕೆ ಸಕಲ ಬಿರುದಾವಳಿಯೊಂದಿಗೆ ಬರಮಾಡಿಕೊಳ್ಳಲಾಗುತ್ತದೆ.ಮೇಳದ ಶ್ರೀ ಮಹಾಗಣಪತಿಯನ್ನು ಕ್ಷೇತ್ರದ ಛತ್ರ ಗಣಪತಿ ಸನ್ನಿಧಿಯ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಮೂರು ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಕೊನೆಯ ಸೇವೆಯಾಟ ಪ್ರದರ್ಶನದೊಂದಿಗೆ ಮಂಗಳಾಚರಣೆ ನಡೆಯುತ್ತದೆ. ಶ್ರೀ ಕ್ಷೇತ್ರ ಹನುಮಗಿರಿಯ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ತಿರುಗಾಟವೂ 24ರಂದು ಸಮಾಪ್ತಿಗೊಂಡು ಕ್ಷೇತ್ರದಲ್ಲಿ ಸೇವೆಯಾಟ ನಡೆಸುತ್ತದೆ. ಕಟೀಲು, ಪಾವಂಜೆ ಸಹಿತ ಇತರ ಸಂಚಾರಿ ಮೇಳಗಳೂ ಪತ್ತನಾಜೆಯಂದು ತಿರುಗಾಟ ಸಮಾಪ್ತಿಗೊಳಿಸಿ ಕ್ಷೇತ್ರದಲ್ಲಿ ಕೊನೆಯ ಸೇವೆಯಾಟ ಪ್ರದರ್ಶನದೊಂದಿಗೆ ಪ್ರಸಕ್ತ ಸಾಲಿನ ದಿಗ್ವಿಜಯ ಯಾತ್ರೆ ಸಂಪನ್ನಗೊಳಿಸುತ್ತವೆ.
;Resize=(128,128))
;Resize=(128,128))
;Resize=(128,128))
;Resize=(128,128))