ಸಾರಾಂಶ
ತಾಲೂಕಿನ ನಿಡಗಲ್ ಬೆಟ್ಟದ ರಾಮತೀರ್ಥ ಕಲ್ಯಾಣಿ ಹಾಗೂ ಶ್ರೀರಾಮಲಲ್ಲಾ ದೇವಸ್ಥಾನ ಪ್ರಗತಿಗೆ ಅನುದಾನ ಬಿಡುಗಡೆಗೊಳಿಸುವಂತೆ ಇಲ್ಲಿನ ಸಾವಿರಾರು ಸಂಖ್ಯೆಯ ನಾಗರಿಕರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾಗೇಂದ್ರ ಜೆ ಪಾವಗಡ
ಕನ್ನಡಪ್ರಭ ವಾರ್ತೆ ಪಾವಗಡತಾಲೂಕಿನ ನಿಡಗಲ್ ಬೆಟ್ಟದ ರಾಮತೀರ್ಥ ಕಲ್ಯಾಣಿ ಹಾಗೂ ಶ್ರೀರಾಮಲಲ್ಲಾ ದೇವಸ್ಥಾನ ಪ್ರಗತಿಗೆ ಅನುದಾನ ಬಿಡುಗಡೆಗೊಳಿಸುವಂತೆ ಇಲ್ಲಿನ ಸಾವಿರಾರು ಸಂಖ್ಯೆಯ ನಾಗರಿಕರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ನಿಡಗಲ್ ದುರ್ಗವನ್ನು ಚೋಳರು ಸೇರಿದಂತೆ ಹಂಪೆಯ ಶ್ರೀ ಕೃಷ್ಣದೇವರಾಯನ ಸಾಮ್ರಾಜ್ಯಕ್ಕೆ ಒಳಪಟ್ಟ ಹಾಗೂ ರಾಜಮಹಾರಾಜರ ಆಳ್ವಿಕೆ ನಡೆಸಿದ ಬಗ್ಗೆ ಪುರಾವೆಗಳು ಇಲ್ಲಿ ಲಭ್ಯವಿವೆ. ರಾಮಾಯಣದ ಪ್ರಕಾರ ಇಲ್ಲಿನ ವನವಾಸ ಕಾಲದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ಅಂಜನೇಯ ಇಲ್ಲಿ ಕೆಲ ಕಾಲವಾಸವಿದ್ದ ಬಗ್ಗೆ ಪ್ರತೀತಿವಿದೆ. ಶ್ರೀರಾಮರ ವನವಾಸ ಕಾಲದಲ್ಲಿ ಕುಡಿವ ನೀರಿಗೆ ಅಭಾವವಿತ್ತು. ಈ ಸನ್ನಿವೇಶದಲ್ಲಿ ಶ್ರೀರಾಮ ಬಾಣ ಬಿಟ್ಟ ಹಿನ್ನೆಲೆಯಲ್ಲಿ ನೆಲದೊಳಗಿಂದ ನೀರು ಹೊರಚಿಮ್ಮಿದ ಉಲ್ಲೇಖವಿದೆ.ಇತ್ತೀಚೆಗೆ ಸ್ಥಳೀಯ ಶಾಸಕ ಹಾಗೂ ಸಂಸದ ನಿಧಿ ಸೇರಿದಂತೆ ಇತರೆ ಗಣ್ಯರ ಸಹಕಾರದ ಮೇರೆಗೆ ಶ್ರೀರಾಮ ತೀರ್ಥರ ಕಲ್ಯಾಣ ಭಾವಿಯನ್ನು ಸ್ವಲ್ಪ ಮಟ್ಟಿಗೆ ಪ್ರಗತಿ ಪಡಿಸಲಾಗಿದೆ. ರಾಮತೀರ್ಥದಲ್ಲಿ ನೀರು ಸೇವಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಶ್ರಾವಣ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದ್ದು, ಇಲ್ಲಿನ ಭಜನೆ ಮತ್ತು ಇತರೆ ಪೂಜಾ ಕೈಂಕರ್ಯ ನೆರೆವೇರಿಸಿ ಶ್ರೀರಾಮಲಿಗೇಶ್ವರಸ್ವಾಮಿಯನ್ನು ಭಕ್ತಿಭಾವದಿಂದ ಸ್ಮರಿಸಲಾಗುತ್ತಿದೆ.
ಗಣಪತಿ, ಶಿವ ಪಾರ್ವತಿ, ಸೋಮೇಶ್ವರ, ಮಹಾವಿಷ್ಮು, ಲಕ್ಷ್ಮೀನರಸಿಂಹಸ್ವಾಮಿ, ಶ್ರೀರಾಮ, ಅಂಜನೇಯಸ್ವಾಮಿ ಹಾಗೂ ಜೈನಬಸದಿ ಸೇರಿದಂತೆ ನಿಡಗಲ್ ಬೆಟ್ಟದಲ್ಲಿ ಅನೇಕ ದೇಗುಲಗಳಿವೆ. ರಾಜಮಹಾರಾಜರ ಆಳ್ವಿಕೆಗೆ ಒಳಪಟ್ಟ ಈ ಬೆಟ್ಟದ ಸುತ್ತ ಕಲ್ಲಿನ ಕೋಟೆಯಿಂದ ಅವೃತ್ತವಾಗಿದ್ದು, ಹೊರಗಿನವರ ದಾಳಿ ತಡೆಯಲು ಪಿರಂಗಿಗಳ ಮೂಲಕ ಗುಂಡು ಹಾರಿಸುತ್ತಿದ್ದರು. ಈಗಲೂ ಬೃಹತ್ ಗಾತ್ರದ ಪಿರಂಗಿಗಳನ್ನು ಇಲ್ಲಿ ಕಾಣಬಹುದು. ಐತಿಹಾಸಿಕವಾಗಿ ನಿಡಗಲ್ ಬೆಟ್ಟ ಪ್ರಸಿದ್ಧಿಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವಂತೆ ಇಲ್ಲಿನ ನಾಗರಿಕರ ಬಹುದಿನಗಳ ಬೇಡಿಕೆಯಾಗಿದೆ. ಆನೇಕ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇತ್ತೀಚೆಗೆ ಅಯೋಧ್ಯೆಯಲ್ಲಿ ಶ್ರೀರಾಮರ ವಿಗ್ರಹ ಪ್ರತಿಷ್ಠಾಪನೆಯಾದ ಬೆನ್ನಲೆ ಸಿಎಂ ಸಿದ್ದರಾಮಯ್ಯ ರಾಜ್ಯದ ನೂರು ಶ್ರೀರಾಮ ದೇವಸ್ಥಾನಗಳ ಪ್ರಗತಿಗೆ 100ಕೋಟಿ ಬಜೆಟ್‌ನಲ್ಲಿ ಮೀಸಲಿಡುವ ಆಶ್ವಾಷನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರರೇ ವಾಸವಾಗಿದ್ದ ಇಲ್ಲಿನ ರಾಮತೀರ್ಥ ಸ್ಥಳದಲ್ಲಿ ಸುಸಜ್ಜಿತವಾದ ಶ್ರೀರಾಮ ದೇಗುಲ ಸ್ಥಾಪಿಸಬೇಕು. ಹೀಗಾಗಿ ಇಲ್ಲಿನ ಪುಣ್ಯ ಭೂಮಿಯನ್ನು ಗಂಭೀರವಾಗಿ ಪರಿಗಣಿಸಿ ರಾಮತೀರ್ಥ ಕಲ್ಯಾಣಿ ಪಕ್ಕದಲ್ಲಿರುವ ಶ್ರೀರಾಮದೇವಸ್ಥಾನ ಪ್ರಗತಿಗೆ ಅನುದಾನ ಬಿಡುಗಡೆಗೊಳಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಇಲ್ಲಿನ ಸಾವಿರಾರು ಸಂಖ್ಯೆಯ ಭಕ್ತರು ಮತ್ತು ರೈತ, ಇತರೆ ಪ್ರಗತಿ ಪರ ಸಂಘಸಂಸ್ಥೆಗಳ ಒತ್ತಾಯಿಸಿ ಮನವಿ ಮಾಡಿದ್ದಾರೆ.BOXದೇಗುಲ ಜೀರ್ಣೋದ್ಧಾರಕ್ಕಾಗಿ ಮನವಿ
ಅಯೋಧ್ಯೆಯಲ್ಲಿ ಶ್ರೀರಾಮಲುಲ್ಲಾ ವಿಗ್ರಹ ಪ್ರತಿಷ್ಠಾಪನೆ ಬೆನ್ನಲೆ ಸಿಎಂ ಸಿದ್ದರಾಮಯ್ಯ ರಾಜ್ಯದ ನೂರು ಶ್ರೀರಾಮದೇವಸ್ಥಾನಗಳ ಪ್ರಗತಿಗೆ ಬಜೆಟ್‌ನಲ್ಲಿ ನೂರು ಕೋಟಿ ಮೀಸಲಿಡುವ ಭರವಸೆ ವ್ಯಕ್ತಪಡಿಸಿದ್ದು ಸಂತಸ ತಂದಿದೆ. ಇತ್ತೀಚೆಗೆ ಇಲ್ಲಿನ ರಾಮನ ವಿಗ್ರಹ ಕಳ್ಳರ ಪಾಲಾಗಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ತಾಲೂಕಿನ ನಿಡಗಲ್ ಬೆಟ್ಟದ ಐತಿಹಾಸಿಕ ಹಿನ್ನೆಲೆಯ ರಾಮತೀರ್ಥ ಹಾಗೂ ಶ್ರೀರಾಮ ದೇವಸ್ಥಾನ ಜೀರ್ನೋದ್ಧಾರಗೊಳಿಸುವಂತೆ ಹೊಟ್ಟೆಬೊಮ್ಮನಹಳ್ಳಿಯ ತಿಮ್ಮಾರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.