ಕವಿವಿ ಬೆಳವಣಿಗೆಗೆ ಕಾರಣರಾದ ಡಾ. ಡಿ.ಸಿ ಪಾವಟೆ: ಪ್ರೊ. ಮಾರ್ಟಿನ್ ಬರ್ಟನ್

| Published : Jan 05 2025, 01:31 AM IST

ಸಾರಾಂಶ

ಕವಿವಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದೆ. ಪ್ರಸ್ತುತ ಡಾ. ಡಿ.ಸಿ. ಪಾವಟೆ ಫೌಂಡೇಶನ್ ವತಿಯಿಂದ ಆಯ್ಕೆಗೊಂಡ ಸಂಶೋಧಕರಿಗೆ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಶೇಷ ವಿಷಯದ ಕುರಿತು ಅಧ್ಯಯನ ನಡೆಸಲಿದ್ದಾರೆ

ಧಾರವಾಡ:

ಡಾ. ಡಿ.ಸಿ. ಪಾವಟೆ ದೂರದೃಷ್ಟಿವುಳ್ಳ ಶಿಕ್ಷಣ ತಜ್ಞರಾಗಿ, ಆಡಳಿತಗಾರರಾಗಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕಾರಣರು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಾರ್ಟಿನ್ ಬರ್ಟನ್ ಹೇಳಿದರು.

ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಡಾ. ಡಿ.ಸಿ. ಪಾವಟೆ ಫೌಂಡೇಶನ್ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ ‘ಪಾವಟೆ ಫೆಲೋಸ್ ವಿಷಯದ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಕವಿವಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದೆ. ಪ್ರಸ್ತುತ ಡಾ. ಡಿ.ಸಿ. ಪಾವಟೆ ಫೌಂಡೇಶನ್ ವತಿಯಿಂದ ಆಯ್ಕೆಗೊಂಡ ಸಂಶೋಧಕರಿಗೆ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಶೇಷ ವಿಷಯದ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮಾತನಾಡಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮಾದರಿಯಲ್ಲಿ ಕವಿವಿ ರೂಪಿಸಿದ್ದು ಪಾವಟೆ ಅವರಿಗೆ ಸಲ್ಲುತ್ತದೆ. ಅವರೊಬ್ಬ ದೂರದೃಷ್ಟಿಯುಳ್ಖ ಆಡಳಿತಗಾರ ಮತ್ತು ಶಿಕ್ಷಣ ತಜ್ಣರಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಪಾವಟೆ ಕುರಿತು ತಿಳಿದುಕೊಳ್ಳಬೇಕು ಎಂದರು.

ಕವಿವಿ ವಿಶ್ರಾಂತ ಕುಲಪತಿ ಪ್ರೊ. ಪ್ರಮೋದ ಗಾಯಿ ಮಾತನಾಡಿ, ಕವಿವಿ 25 ವರ್ಷ ಪೂರೈಸುತ್ತಿರುವುದು ಒಂದು ಮೈಲುಗಲ್ಲು ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕವಿವಿ ಗುರುತಿಸಿಕೊಳ್ಳಲು ಡಾ. ಡಿ.ಸಿ. ಪಾವಟೆ ಫೌಂಡೇಶನ್ ಪಾತ್ರ ಬಹಳ ಇದೆ ಎಂದು ಹೇಳಿದರು.

ಕವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ವಿದ್ಯಾರ್ಥಿಗಳು ಪಡೆದ ಜ್ಞಾನವನ್ನು ಸಮಾಜಕ್ಕೆ ತಿರುಗಿ ನೀಡಬೇಕಾದ ಅವಶ್ಯಕತೆ ಇದೆ ಎಂದರು.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇಂಟರ್‌ ನ್ಯಾಷನಲ್ ರಿಲೇಶನ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಜೇಮ್ಸ್ ಮಯಾಲ್, ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ಮೂಲಕ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ ಎಂದರು.

ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶ ಶರದ ಜವಳಿ ಮಾತನಾಡಿ, ಪಾವಟೆ ಅವರೊಬ್ಬ ಶಿಕ್ಷಣ ತಜ್ಞರಾಗಿ, ಕವಿವಿ ವಿದ್ಯಾಸೌಧ ಕಟ್ಟಡ ನಿರ್ಮಿಸುವಲ್ಲಿ ತಮ್ಮದೇ ಆದ ಕಲ್ಪನೆ ದೂರದೃಷ್ಟಿ ಹೊಂದಿದ್ದರು ಎಂದರು

ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ. ಎಸ್. ಮಾತನಾಡಿದರು. ತಾಂತ್ರಿಕ ಗೋಷ್ಠಿಯಲ್ಲಿ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ, ಪ್ರೊ. ಎಂ. ಗೋವಿಂದರಾವ್, ಪ್ರಾಧ್ಯಾಪಕ ಡಾ. ಎಡ್ವರ್ಡ್ ವಿಲ್ಸನ್ ಲೀ ಮಾತನಾಡಿದರು. ಡಾ. ಡಿ.ಸಿ. ಪಾವಟೆ ಫೌಂಡೇಶನ್ ಸಂಯೋಜಕ ಡಾ. ಬಿ.ಎಚ್. ನಾಗೂರ, ಪ್ರೊ. ಸಾರಾ ಬರ್ಟನ್‌, ಕೌಶಿಕ ಮುಖರ್ಜಿ, ಪ್ರೊ. ಗೋವಿಂದರಾವ, ಪ್ರೊ. ವಿಶ್ವನಾಥ ಚಚಡಿ ಇದ್ದರು.