ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಾಯಿ ಆರೋಗ್ಯವು ಸಂಪೂರ್ಣ ದೈಹಿಕ ಆರೋಗ್ಯಕ್ಕೆ ಪೂರಕ. ಪ್ರತಿದಿನ ಕೆಲವು ಅಭ್ಯಾಸಗಳನ್ನು ನಮ್ಮ ದಿನಚರಿಯಲ್ಲಿ ರೂಡಿಸಿಕೊಳ್ಳುವ ಮೂಲಕ ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಮಾರುತಿ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಯಿ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಯಿ ರೋಗಗಳಿಂದ ಆಗುವ ಸಾವು ಮತ್ತು ನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂತೋಷದ ಬಾಯಿ ಎಂದರೆ ಸಂತೋಷದ ಮನಸ್ಸು ಎಂಬ ಈ ವರ್ಷದ ಘೋಷ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಹಿರಿಯ ದಂತ ಆರೋಗ್ಯ ಅಧಿಕಾರಿ ಡಾ. ಜೆ.ಡಿ.ಸ್ಮಿತಾ ಮಾತನಾಡಿ, ಹಲ್ಲು ಹುಳುಕಾಗುವುದು, ವಸಡಿನ ಸಮಸ್ಯೆ, ಉಸಿರಿನ ಸಮಸ್ಯೆ ಈ ಕೆಲವು ಸಮಸ್ಯೆಗಳ ಕಾರಣಗಳಿಂದ ನಾವು ಬಾಯಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.
ಪ್ರಸ್ತುತ ದಿನದಲ್ಲಿ ವಸಡಿನ ಕ್ಯಾನ್ಸರ್ ನಂತಹ ಗಂಭೀರ ಸ್ವರೂಪದ ಕಾಯಿಲೆಗಳು ಹರಡುತ್ತಿರುವ ಕಾರಣ ಬಾಯಿ ಅರೋಗ್ಯದ ಮೇಲೆ ಗಮನಹರಿಸುವುದು ಅನಿವಾರ್ಯ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹೀಗೆ ಎರಡು ಬಾರಿ ಬ್ರಷ್ ಮಾಡುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದರು.ದಿನಾಚರಣೆ ಅಂಗವಾಗಿ ಗರ್ಭಿಣಿಯರು, ಸಾರ್ವಜನಿಕರಿಗೆ ದಂತ ತಪಾಸಣೆ ಶಿಬಿರ ನಡೆಯಿತು. ಈ ವೇಳೆ ಸ.ಆ ಕೇಂದ್ರ ಅರಕೆರೆ ದಂತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮೇಘನಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ಬಿ. ಮಂಗಳ, ಸ್ಮಿತಾ, ಆಶಾ ಕಾರ್ಯಕರ್ತೆ ಚಾಂದಿನಿ, ಹೇಮಾವತಿ ಅಶ್ವಿನಿ ಹಾಗೂ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಇತರರು ಇದ್ದರು.