- ಜಿಪಂ ಬಳಿ ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರ ಆಗ್ರಹ । 3 ದಿನದಲ್ಲೇ ಸಭೆ ಕರೆದು ಪರಿಹಾರಕ್ಕೆ ಚರ್ಚೆ: ಸಿಇಒ ಭರವಸೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸರ್ಕಾರದ ವಿವಿಧ ಇಲಾಖೆಗಳು ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆಯ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರದ ನಿಗದಿಂದ ಕನಿಷ್ಠ ವೇತನ ಪಾವತಿಸಲು ತಕ್ಷಣ ನಿರ್ದೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಯುಟಿಯುಸಿ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಘೋಷಣೆಗಳನ್ನು ಕೂಗುವ ಮೂಲಕ ಒತ್ತಾಯಿಸಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ರಿಗೆ ಮನವಿ ಅರ್ಪಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಈ ವೇಳೆ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಸ್ವಚ್ಛತಾ ಸಿಬ್ಬಂದಿ 15-20 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿಗೂ ಸಮಸ್ಯೆಗಳಲ್ಲೇ ಕಾಲ ಕಳೆಯಬೇಕಾಗಿದೆ ಎಂದರು.
ಬಿಸಿಎಂ ಇಲಾಖೆಯಲ್ಲಿ 2026-27ನೇ ಸಾಲಿನಲ್ಲಿ ನಿರೀಕ್ಷಿತಾ ಏಜೆನ್ಸಿಯವರು ಡಿಸೆಂಬರ್ 2025 ಹಾಗೂ ಜನವರಿ 2026ನೇ ಸಾಲಿನಲ್ಲಿ ಅಡುಗೆಯವರಿಗೆ ಹಾಗೂ ಅಡುಗೆ ಸಹಾಯಕರಿಗೆ ಕಡಿಮೆ ವೇತನ ಪಾವತಿಸುತ್ತಿದ್ದಾರೆ. ಫೆಬ್ರವರಿ ವೇತನವನ್ನು ಇನ್ನೂ ಪಾವತಿಸಿಲ್ಲ. ಉದ್ಯೋಗ ಪ್ರಮಾಣ ಪತ್ರ ಹಾಗೂ ಯೂನಿಫಾರಂ ನೀಡಲು ಪ್ರತಿಯೊಬ್ಬ ಕಾರ್ಮಿಕರಿಂದ ₹5 ಸಾವಿರಕ್ಕೆ ಏಜೆನ್ಸಿಯವರು ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಪಂ ಸಿಇಒ, ಹೊರ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳಿಗೆ ಇನ್ನು 3 ದಿನಗಳ ಒಳಗಾಗಿ ಇಲಾಖೆಯ ಅಧಿಕಾರಿಗಳು, ಏಜೆನ್ಸಿಗಳು ಹಾಗೂ ಸಂಘಟನೆಯ ಪ್ರತಿನಿಧಿಗಳ ಸಭೆಯನ್ನು ಕರೆದು, ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿಂಗರಾಜ ಸಿದ್ದಮ್ಮನಹಳ್ಳಿ, ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಶಿವಾಜಿ ರಾವ್, ಕಾರ್ಯದರ್ಶಿ ಮಂಜನಾಥ ಕುಕ್ಕವಾಡ, ಮುಖಂಡರಾದ ರವಿನಾಯ್ಕ, ಸ್ವಾಮಿ ನಿಂಗಪ್ಪ, ಹನುಮಂತಪ್ಪ, ಮನೋಹರ, ರತ್ನಮ್ಮ, ಸುಮ, ಕರಿಬಸಮ್ಮ, ಗಿರಿಜಮ್ಮ, ರೇಖಾ, ಬೇಬಿ, ರೂಪಾ, ನವೀನ, ಹರೀಶ ಇತರರು ಇದ್ದರು.
- - -(ಬಾಕ್ಸ್)
* ಬೇಡಿಕೆಗಳೇನೇನು? - ರಾಜ್ಯ ಸರ್ಕಾರದ ನಿಗದಿತ ಕನಿಷ್ಠ ವೇತನವನ್ನು ತಕ್ಷಣವೇ ಪಾವತಿಸಲು ಜಿಪಂ ಸಿಇಒ ನಿರ್ದೇಶನ ನೀಡಬೇಕು.- ಈವರೆಗೆ ಕಡಿತಗೊಂಡ ಬಾಕಿ ಮೊತ್ತವನ್ನು ಪಾವತಿಸಲು ಏಜೆನ್ಸಿಗೆ ಕಟ್ಟುನಿಟ್ಟಾಗಿ ಆದೇಶಿಸಬೇಕು.
- ಮುಂದಿನ ದಿನಗಳಲ್ಲಿ ಬಾಕಿ ಉಳಿಕೆಯಂಥದ್ದು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳಬೇಕು.- ಕಾರ್ಮಿಕರ ಶಾಸನ ಬದ್ಧ ಸೌಲಭ್ಯಗಳಾದ ವೇತನ ಚೀಟಿ, ಯೂನಿಫಾರಂ, ಉದ್ಯೋಗ ಪ್ರಮಾಣ ಪತ್ರ, ಗುರುತಿನ ಚೀಟಿ, ಇನ್ನಿತರೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು - ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್ ಕಟಾವಣೆಯ ಬಗ್ಗೆ ಪ್ರತಿ ತಿಂಗಳು ಮಾಹಿತಿ ಒದಗಿಸಬೇಕು.
- ಇಲಾಖೆಯ ಅಧಿಕಾರಿಗಳು, ಏಜೆನ್ಸಿಗಳು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಕಾಲಕಾಲಕ್ಕೆ ನಿಯಮಿತವಾಗಿ ಸಭೆ ನಡೆಸಬೇಕು.- - -
-9ಕೆಡಿವಿಜಿ1, 2:ದಾಪಣಗೆರೆ ಜಿ.ಪಂ. ಕಚೇರಿ ಎದುರು ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಯುಟಿಯುಸಿ ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.