ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಗೆದ್ದವರಿಗೆ ಜನರು ಗುರುತರವಾದ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಗಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಿ. ಮತ ನೀಡಿದ ಜನರ ಋಣವನ್ನು ಅಭಿವೃದ್ಧಿ ಕಾರ್ಯದ ಮೂಲಕ ತೀರಿಸಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.ತಾಲೂಕಿನ ಮೇಲೂರು ಗ್ರಾಮದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸದಸ್ಯರಾದ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಹಾಗೂ ನಾಗಮಂಗಲ ಗ್ರಾಮ ಪಂಚಾಯಿತಿಗಳ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿಸ್ವಚ್ಛ ಸುಂದರ ಗ್ರಾಮ ಪಂಚಾಯಿತಿಗಳೆಂದು ರಾಜ್ಯ, ರಾಷ್ಟ್ರ ಗುರುತಿಸುವ ಹಾಗೆ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಅದರಲ್ಲೂ ಕೋಲಾರ ಭಾಗದಲ್ಲೂ ಪಕ್ಷಕ್ಕೆ ಹೆಚ್ಚಿನ ಶಕ್ತಿಯಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರ ಹಿಂದೆ ನಾನಿದ್ದೇನೆ ಎಂಬ ಭರವಸೆ ಇದ್ದರೆ ಸಾಕು. ಎಲ್ಲ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದರು.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ತಂದು ಕುಮಾರಣ್ಣನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಷ್ಟೆ ನಮ್ಮ ಗುರಿ ಮತ್ತು ಆ ನಿಟ್ಟಿನಲ್ಲಿ ಈಗಿನಿಂದಲೆ ಕಾರ್ಯಪ್ರವೃತ್ತರಾಗಬೇಕು. ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ 48 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಬೆಂಬಲಿತ 35 ಮಂದಿ ಸದಸ್ಯರು ಗೆದ್ದಿದ್ದಾರೆ. ಇದು ನಮ್ಮ ಪಕ್ಷದ ಶಕ್ತಿ, ಕಾರ್ಯಕರ್ತರ ಶಕ್ತಿ ತಿಳಿಸುತ್ತದೆ ಎಂದರು.
ತಾಪಂ, ಜಿಪಂ ಚುನಾವಣೆಗೆ ಸಿದ್ಧತೆಮುಂದಿನ ವರ್ಷ ನಡೆಯುವ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೂ ನಾವು ಈಗಿನಿಂದಲೆ ಸನ್ನದ್ಧರಾಗಬೇಕಿದೆ. ಇದೀಗ ಚುನಾವಣೆ ನಡೆದ 4 ಪಂಚಾಯಿತಿ ಬಿಟ್ಟು ಇನ್ನುಳಿದ 30 ಗ್ರಾಮ ಪಂಚಾಯಿತಿ, 7 ಜಿಲ್ಲಾ ಪಂಚಾಯಿತಿ, 13 ತಾಲೂಕು ಪಂಚಾಯಿತಿ ಸ್ಥಾನಗಳನ್ನೂ ಗೆಲ್ಲುವತ್ತ ನಮ್ಮೆಲ್ಲರ ಪಕ್ಷ ಸಂಘಟನೆ, ಕಾರ್ಯ ಚಟುವಟಿಕೆಗಳು ನಡೆಯಬೇಕು ಎಂದರು.
ಈ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಶಕ್ತಿ ತುಂಬಿದ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು ನಿಮ್ಮೆಲ್ಲರ ಆಶೋತ್ತರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ. ಇದೀಗ ಗೆದ್ದ ಎಲ್ಲ ಸದಸ್ಯರು ಕೂಡ ಮತದಾರರ ಮನದಾಸೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು, ಅವರ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಅಭಿವೃದ್ದಿ ಕಾರ್ಯಗಳನ್ನು ನಡೆಸಿ ಉತ್ತಮ ಹೆಸರು ಪಡೆದುಕೊಳ್ಳಬೇಕು, ಆ ಮೂಲಕ ನಿಮಗೂ ನಮ್ಮ ಪಕ್ಷಕ್ಕೂ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.ಸೋತವರು ಎದೆಗುಂದಬೇಡಿ
ಈ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಯಾವುದೆ ಕಾರಣಕ್ಕೂ ಎದೆಗುಂದಬೇಡಿ. ಎಂದಿನಂತೆ ನೀವು ಕಾರ್ಯಕರ್ತರು, ಮತದಾರರ ಸಂಪರ್ಕದಲ್ಲಿರಿ, ನಿಮಗೆ ಸೂಕ್ತ ಸ್ಥಾನ ಮಾನ ನೀಡುವುದಾಗಿ ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಹಾಗೂ ನಾಗಮಂಗಲ ಗ್ರಾಮ ಪಂಚಾಯಿತಿಗಳ ಜೆಡಿಎಸ್ ಬೆಂಬಲಿತ ವಿಜೇತ ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಡಿ.ಬಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಂಕ್ ಮುನಿಯಪ್ಪ, ತಾದೂರು ರಘು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಂಜುನಾಥ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಹುಜಗೂರು ರಾಮಯ್ಯ, ನಾಗಮಂಗಲ ಶ್ರೀನಿವಾಸ್‌ಗೌಡ, ತಿಮ್ಮಸಂದ್ರ ಶಿವಾರೆಡ್ಡಿ, ಆರ್.ಎ.ಉಮೇಶ್ ಹಾಜರಿದ್ದರು.