ಸರ್ಕಾರ ಶಾಲೆ ಮತ್ತು ಮಕ್ಕಳ ಶಿಕ್ಷಣ ಅಗತ್ಯಗಳನ್ನು ಕಾಲಕಾಲಕ್ಕೆ ಪೂರೈಸುವ ಬಗ್ಗೆ ವಿಶೇಷ ಆದ್ಯತೆ ಕೊಡಬೇಕು.

ಕನ್ನಡಪ್ರಭ ವಾರ್ತೆ ಕುಮಟಾ

ಸರ್ಕಾರ ಶಾಲೆ ಮತ್ತು ಮಕ್ಕಳ ಶಿಕ್ಷಣ ಅಗತ್ಯಗಳನ್ನು ಕಾಲಕಾಲಕ್ಕೆ ಪೂರೈಸುವ ಬಗ್ಗೆ ವಿಶೇಷ ಆದ್ಯತೆ ಕೊಡಬೇಕು. ಪ್ರತಿಯೊಬ್ಬರೂ ತಾವು ಕಲಿತ ಶಾಲೆಯ ಅಗತ್ಯಗಳನ್ನು ಸಾಧ್ಯವಾದಷ್ಟು ಪೂರೈಸುವ ಮೂಲಕ ವಿದ್ಯೆ ನೀಡಿದ ಶಾಲೆಯ ಋಣವನ್ನು ತೀರಿಸಬೇಕು ಎಂದು ಉದ್ಯಮಿ ವಿದ್ಯಾಧರ ವಿಷ್ಣು ಹೆಗಡೆ ಯಡೆಕೇರಿ ಹೇಳಿದರು.

ಕಲ್ಲಬ್ಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ತಾಪಂ ಇಒ ರಾಜೇಂದ್ರ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಕಲ್ಲಬ್ಬೆ ಶಾಲೆಯ ಅಗತ್ಯತೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಸ್‌ಡಿಎಂಸಿಯ ಕಾರ್ಯ ಹಾಗೂ ಗ್ರಾಮಸ್ಥರ ಸಹಯೋಗ ಶ್ಲಾಘನೀಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶ್ರೀಪಾದ ಎಂ.ಹೆಗಡೆ ಮಾತನಾಡಿ, ಶಾಲೆಗೆ ಕೊಠಡಿಗಳು ಬೇಕಿದ್ದಾಗ ಸರ್ಕಾರದಿಂದ ಅನುದಾನ ಸಿಗದಿದ್ದಾಗ ಸಾಕಷ್ಟು ಪರಿಶ್ರಮಪಟ್ಟು ಶಿಕ್ಷಣ ಪ್ರೇಮಿ ದಾನಿಗಳ ಸಹಯೋಗದಿಂದ ಕೊಠಡಿ ನಿರ್ಮಾಣ ಸಾಧ್ಯವಾಯಿತು. ಶಾಲೆಗೆ ಸುಸಜ್ಜಿತ ಶೌಚಗ್ರಹ, ಆಟದ ಮೈದಾನದ ಅಗತ್ಯವಿದ್ದು ಎಲ್ಲರ ಸಹಕಾರ ಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲೆ ಕೊಠಡಿ ನಿರ್ಮಾಣಕ್ಕೆ ₹೫ ಲಕ್ಷ ದಾನ ನೀಡಿದ್ದ ವಿದ್ಯಾಧರ ವಿಷ್ಣು ಹೆಗಡೆ ಯಡೆಕೇರಿ, ತಲಾ ₹೧ ಲಕ್ಷ ಕೊಡುಗೆ ನೀಡಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಲಕ್ಷ್ಮಣ ಎಂ.ಸಣ್ಣಗೌಡರ ಹಾಗೂ ವಿನಾಯಕ ರಾಮಚಂದ್ರ ಭಟ್ ರಂಗಭಟ್ರಮನೆ ಇವರಿಗೆ ಸನ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ರವಿ ಹೆಗಡೆ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಎಂ.ಆರ್. ನಾಯ್ಕ ಕುಡವಳ್ಳಿ, ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಎಸ್.ವಿ. ಭಟ್ ಮಕ್ಕಿಕೇರಿ, ಪಂಚಾಯಿತಿ ಸದಸ್ಯ ಸುಬ್ರಹ್ಮಣ್ಯ ಭಟ್, ಗಿರಿಯಾ ಗೌಡ, ಸಿಆರ್‌ಪಿ ಕರುಣಾ ಕಾಮತ, ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷೆ ಕಮಲಾ ಮಾತನಾಡಿದರು.

ಮುಖ್ಯಶಿಕ್ಷಕಿ ಮಂಗಲಾ ವಿಷ್ಣು ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಶಾಲೆಗೆ ಸ್ಮಾರ್ಟ ಕ್ಲಾಸ್, ವರಾಂಡಕ್ಕೆ ಕಟಾಂಜನ, ಕಂಪ್ಯೂಟರ್‌ಗಳ ಬೇಡಿಕೆ ಮಂಡಿಸಿದರು. ಶಿಕ್ಷಕ ಮಹೇಶ ಭಟ್, ಶಿಕ್ಷಕಿ ಉಷಾ ಶೇಷಗಿರಿ, ವಿಷ್ಣು ನಂದಿ ಭಟ್ ನಿರ್ವಹಿಸಿದರು.