ಕಬ್ಬು ಬೆಳೆಗಾರರಿಗೆ ಜೇಬಿನಿಂದ ದುಡ್ಡು ಕೊಡಬೇಕಾ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡನೀಯ. ಕಬ್ಬಿನ ಉಪ ಉತ್ಪನ್ನವಾದ ಮದ್ಯ ಮಾರಾಟದಿಂದ ಬರುವ ಅಬಕಾರಿ ಸುಂಕದ ಆದಾಯದಲ್ಲೇ ಕಬ್ಬು ಬೆಳೆಗಾರರಿಗೆ ಹಣ ನೀಡಲಿ.
ಹುಬ್ಬಳ್ಳಿ:
ಕಬ್ಬು ಬೆಳೆಗಾರರಿಗೆ ಜೇಬಿನಿಂದ ದುಡ್ಡು ಕೊಡಬೇಕಾ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡನೀಯ. ಕಬ್ಬಿನ ಉಪ ಉತ್ಪನ್ನವಾದ ಮದ್ಯ ಮಾರಾಟದಿಂದ ಬರುವ ಅಬಕಾರಿ ಸುಂಕದ ಆದಾಯದಲ್ಲೇ ಕಬ್ಬು ಬೆಳೆಗಾರರಿಗೆ ಹಣ ನೀಡಲಿ ಎಂದು ಪ್ರಗತಿಪರ ರೈತ ಮುಖಂಡ ಬಸವರಾಜ ಭೂತಾಳಿ ಆಗ್ರಹಿಸಿದರು. ಮುಂದೆ ಮದ್ಯದಂಗಡಿ ಬಂದ್ ಮಾಡಿ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಕೆಯನ್ನೂ ಇದೇ ವೇಳೆ ನೀಡಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಲಕ್ಷಾಂತರ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಕಬ್ಬಿನ ಬೆಲೆ ಹೆಚ್ಚಳ ಮಾಡದೇ, ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಬ್ಬಿನ ಉಪ ಉತ್ಪನ್ನವಾದ ಮದ್ಯದ ಮಾರಾಟದಿಂದ ಬರುವ ಅಬಕಾರಿ ಸುಂಕದ ಆದಾಯದಲ್ಲಿಯೇ ರೈತರ ಕಬ್ಬಿಗೆ ಹೆಚ್ಚಿನ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ಒಂದೆಡೆ ಎಂಎಸ್ಪಿ ಕೇಂದ್ರದ್ದು ಎನ್ನುವ ರಾಜ್ಯ ಸರ್ಕಾರ, ಮತ್ತೊಂದು ಕಡೆ ಬೊಕ್ಕಸದಲ್ಲಿ ಹಣವಿಲ್ಲದೆ ದಿವಾಳಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರೈತರ ಸಭೆಯಲ್ಲಿ ಸಿಎಂ ಜೇಬಿನಿಂದ ದುಡ್ಡು ಕೊಡಬೇಕಾ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೇ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಬದಲು ನೇರವಾಗಿ ಮದ್ಯದ ಮಳಿಗೆ ಬಂದ್ ಮಾಡಿಸಲಾಗುವುದು. ನಂತರ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಬೇಡಿಕೆ:ಕಬ್ಬಿನಿಂದಲೇ ಸರ್ಕಾರಕ್ಕೆ ₹ 12,420 ಆದಾಯ ಬರುತ್ತಿರುವಾಗ ಅದರಲ್ಲಿ ಶೇ.50ರಷ್ಟು (₹6210) ಅನ್ನು ಎಸ್ಎಪಿ (ರಾಜ್ಯ ಬೆಂಬಲ ಬೆಲೆ) ಆಗಿ ರೈತರಿಗೆ ನೀಡಬೇಕು. ಉಳಿದ ಶೇ.50ರಷ್ಟು ಹಣವನ್ನು ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಗೊಬ್ಬರ ಬೆಲೆ ಏರಿಕೆ, ಬರದ ಕಷ್ಟ ಹಾಗೂ ಸಾಲದ ಹೊರೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸ್ವಾಮಿನಾಥನ್ ವರದಿ ಆಧಾರದಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಮುಖಂಡ ಭೂತಾಳಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಸವರಾಜ ಇಟ್ಟಣ್ಣವರ ಸೇರಿದಂತೆ ಅನೇಕರಿದ್ದರು.