ಕೂಡಲೇ ಬೇಸಿಗೆ ಸಂಭಾವನೆ ನೀಡಿ

| Published : Aug 14 2024, 12:54 AM IST

ಸಾರಾಂಶ

:ಸಿಂಧನೂರು ತಾಪಂ ಕಚೇರಿ ಎದುರು ಮಂಗಳವಾರ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿಯ ಗೌರವಾಧ್ಯಕ್ಷ ಶೇಕ್ಷಾಖಾದ್ರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು:

ತಾಲೂಕಿನ ಅಕ್ಷರ ದಾಸೋಹ ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಎದುರು ಅಕ್ಷರ ದಾಸೋಹ ಬಿಸಿಊಟ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು.

ಸಮಿತಿಯ ಗೌರವಾಧ್ಯಕ್ಷ ಶೇಕ್ಷಾಖಾದ್ರಿ ಮಾತನಾಡಿ, ಬೇಸಿಗೆ ಕಾಲದಲ್ಲಿ ಅಡುಗೆ ಮಾಡಿದ ಸಿಬ್ಬಂದಿಗಳಿಗೆ ನೀಡಬೇಕಾದ ಸಂಭಾವನೆಯನ್ನು ಕೂಡಲೇ ನೀಡಬೇಕು, ಬ್ಯಾಂಕ್ ಖಾತೆಯ ನಿರ್ವಹಣೆಯನ್ನು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಗುರುಗಳ ಬದಲಾಗಿ ಮುಖ್ಯಗುರುಗಳು ಮತ್ತು ಮುಖ್ಯ ಅಡುಗೆಯವರೆಗೆ ಜವಾಬ್ದಾರಿ ನೀಡಲು ಬಂದಿರುವ ಮಧ್ಯಂತರ ಆದೇಶವನ್ನು ಅನುಷ್ಠಾನಗೊಳಿಸಬೇಕು. ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ಪಡಿತರ ವಿತರಣೆ ಮಾಡಬೇಕು. ಪಡಿತರ ವಿತರಣೆ ಸಮಯದಲ್ಲಿ ನೀಡದೇ ಇರುವ ಬೇಳೆ, ಎಣ್ಣೆ ಖರೀದಿಸಿದ ಹಣವನ್ನು ಪಾವತಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾದಿಲ್ವಾರು ಹಣ ಪಾವತಿ ಮಾಡಬೇಕು. ಎಂದಿನಂತೆ ಬಾಳೆಹಣ್ಣು ಮತ್ತು ಮೊಟ್ಟೆ ಹಣವನ್ನು ಮುಖ್ಯ ಅಡುಗೆಯವರ ಖಾತೆಗೆ ಚೆಕ್ ನೀಡಬೇಕು. ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ನೀಡುವ ಊಟದ ಹಾಜರಾತಿ ನೀಡಬೇಕು ಹಾಗೂ ಒಂದು ವೇಳೆ ಮಕ್ಕಳು ಅದೇ ಶಾಲೆಯಲ್ಲಿದ್ದರೆ ಮಾತ್ರ ಬಿಸಿಯೂಟ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಘಟನೆಯ ರೇಣುಕಮ್ಮ.ಕೆ, ವಿಶಾಲಾಕ್ಷಿ, ಶರಣಮ್ಮ ಪಾಟೀಲ್, ಶಕುಂತಲಾ, ಮುಖಂಡರಾದ ರೇಣುಕಾ ಕಣ್ಣೂರು, ಶ್ರೀದೇವಿ, ಸರಸ್ವತಿ ಮುಳ್ಳೂರು, ವಿಜಯಲಕ್ಷ್ಮೀ ಕೆಂಗಲ್ ಭಾಗವಹಿಸಿದ್ದರು. ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗೇರಾ ಮನವಿ ಪತ್ರ ಸ್ವೀಕರಿಸಿದರು.