ಕನಕಗಿರಿ: ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಹರಾಜಿನ ಬಾಕಿ ಮೊತ್ತ ಪಾವತಿಸದೇ ಇರುವ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ.

ಹೌದು, 2025-26ನೇ ಸಾಲಿನಲ್ಲಿ ಸರ್ಕಾರದ ಅಧೀನದಲ್ಲಿರುವ ಶ್ರೀ ಕನಕಾಚಲಪತಿ ದೇವಸ್ಥಾನದ ಸಗಟು ತೆಂಗಿನಕಾಯಿ ವ್ಯಾಪಾರದ 2025ರ ಏ. 4ರಂದು ಒಂದು ವರ್ಷದ ಟೆಂಡರ್ ಅನ್ನು ಶಿವಪ್ರಕಾಶ ತೆಂಗಿನಕಾಯಿ ಪಡೆದಿದ್ದು, ₹29 ಲಕ್ಷಕ್ಕೆ ಟೆಂಡರ್ ಆಗಿದೆ. ಈ ಪೈಕಿ ₹21.50 ಲಕ್ಷ ಮಾತ್ರ ಹಣ ದೇವಸ್ಥಾನಕ್ಕೆ ಭರಿಸಿದ್ದಾರೆ. ಬಾಕಿ ಉಳಿದ ಮೊತ್ತ ಮೂರು ದಿನದೊಳಗೆ ಪಾವತಿ ಮಾಡದೆ ಇದ್ದ ಕಾರಣ ನೋಟಿಸ್ ಮುಟ್ಟಿದ ಮೂರು ದಿನದೊಳಗಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡಿಸಲು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ ಆದೇಶಿದ್ದಾರೆ.

ಅಲ್ಲದೇ ಈಗಾಗಲೇ ಬೀಟುದಾರರ ಹಣ ಪಾವತಿಸಲು ಅವಧಿ ಮುಗಿದರೂ ಗುತ್ತಿಗೆದಾರರು ಹಣ ಪಾವತಿಸಿಲ್ಲ. ನೋಟಿಸ್ ಪಡೆದು 15 ದಿನ ಕಳೆದರೂ ದೇವಸ್ಥಾನಕ್ಕೆ ಬಾಕಿ ಹಣ ಪಾವತಿಸಿಲ್ಲ. ಅಪರ ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲವಾಗಿದೆ. ಕೆಲ ದಪ್ಪ ಚರ್ಮದ ಅಧಿಕಾರಿಗಳು ಈ ಪ್ರಕರಣದಲ್ಲಿ ಆಟವಾಡುತ್ತಿದ್ದು, ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಬಹಿರಂಗ ಹರಾಜಿನ ಪ್ರಕ್ರಿಯೆಯಂತೆ ಬಾಕಿ ಹಣ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕನಕಾಚಲಪತಿ ದೇವಸ್ಥಾನದ ಸಗಟು ತೆಂಗಿನಕಾಯಿ ಟೆಂಡರ್ ಪಡೆದು ಇದೀಗ ದೇಗುಲಕ್ಕೆ ಪಂಗನಾಮ ಹಾಕಲು ಹೊರಟಿರುವ ಬೀಟುದಾರರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಲ ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿ ಗುತ್ತಿಗೆದಾರರಿಂದ ಹಣ ಪಡೆದು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಕರವೇ ತಾಲೂಕಾಧ್ಯಕ್ಷ ಹರೀಶ ಪೂಜಾರ ತಿಳಿಸಿದ್ದಾರೆ.

ಕನಕಾಲಚಪತಿ ದೇಗುಲದ ತೆಂಗಿನಕಾಯಿ ಟೆಂಡರ್ ಬಾಕಿ ಮೊತ್ತದ ಕುರಿತು ಪತ್ರ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕನಕಗಿರಿ ಪಿಐ ವಿ.ನಾರಾಯಣ ತಿಳಿಸಿದ್ದಾರೆ.