ಮೈಷುಗರ್ ನಲ್ಲಿ ಉತ್ಪಾದನೆಯಾದ ಸಕ್ಕರೆಗೆ ಪೂಜೆ ಸಲ್ಲಿಸಿ ಪ್ಯಾಕಿಂಗ್ ಪ್ರಕ್ರಿಯೆಗೆ ಚಾಲನೆ

| Published : Aug 06 2024, 12:38 AM IST

ಮೈಷುಗರ್ ನಲ್ಲಿ ಉತ್ಪಾದನೆಯಾದ ಸಕ್ಕರೆಗೆ ಪೂಜೆ ಸಲ್ಲಿಸಿ ಪ್ಯಾಕಿಂಗ್ ಪ್ರಕ್ರಿಯೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ಅರೆಯಲಾಗುತ್ತಿರುವ ಕಬ್ಬಿನಿಂದ ಶೇ.6ರಷ್ಟು ಇಳುವರಿ ಬರುತ್ತಿದೆ. ನಿತ್ಯ 1500 ಮೆಟ್ರಿಕ್ ಟನ್ ಕಬ್ಬು ಅರೆಯಲಾಗುತ್ತಿದೆ. ಬರುವ ಆ.10ರೊಳಗೆ 3500 ಮೆಟ್ರಿಕ್ ಟನ್ ಕಬ್ಬು ಅರೆಯಲು ನಿರ್ಧರಿಸಲಾಗಿದೆ. ಸದ್ಯ ಕಾರ್ಖಾನೆ ಉಗ್ರಾಣದಲ್ಲಿ 8 ಕೋಟಿ ರು. ಮೌಲ್ಯದ 2100 ಕ್ವಿಂಟಾಲ್ ಸಕ್ಕರೆ ದಾಸ್ತಾನಿದ್ದು, ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಲಾಭದಾಯಕವಾಗಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಉತ್ಪಾದನೆಯಾಗಿರುವ ಸಕ್ಕರೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್.ನಾಗರಾಜು ಅವರು ಪೂಜೆ ಸಲ್ಲಿಸಿ ಪ್ಯಾಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್. ನಾಗರಾಜು ಮಾತನಾಡಿ, ಕಳೆದ ಒಂದು ವಾರದಿಂದ ಈವರೆಗೆ 200 ಕ್ವಿಂಟಾಲ್ ಸಕ್ಕರೆ ಉತ್ಪಾದನೆಯಾಗಿದೆ. 4431 ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ ಎಂದರು.

ಸದ್ಯ ಅರೆಯಲಾಗುತ್ತಿರುವ ಕಬ್ಬಿನಿಂದ ಶೇ.6ರಷ್ಟು ಇಳುವರಿ ಬರುತ್ತಿದೆ. ನಿತ್ಯ 1500 ಮೆಟ್ರಿಕ್ ಟನ್ ಕಬ್ಬು ಅರೆಯಲಾಗುತ್ತಿದೆ. ಬರುವ ಆ.10ರೊಳಗೆ 3500 ಮೆಟ್ರಿಕ್ ಟನ್ ಕಬ್ಬು ಅರೆಯಲು ನಿರ್ಧರಿಸಲಾಗಿದೆ. ಸದ್ಯ ಕಾರ್ಖಾನೆ ಉಗ್ರಾಣದಲ್ಲಿ 8 ಕೋಟಿ ರು. ಮೌಲ್ಯದ 2100 ಕ್ವಿಂಟಾಲ್ ಸಕ್ಕರೆ ದಾಸ್ತಾನಿದ್ದು, ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಲಾಭದಾಯಕವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾವೇ ಮುಂದೆ ನಿಂತು ಕಬ್ಬು ಕಡಿಯುವುದು ಇಲ್ಲವೇ ಮುಯ್ಯಿ ಆಳುಗಳ ಮೂಲಕ ಕಬ್ಬು ಕಡಿಯುವುದನ್ನು ರೈತರು ರೂಢಿಸಿಕೊಳ್ಳಬೇಕು. ಇದರಿಂದ ತಮ್ಮ ಕುಟುಂಬ ಮತ್ತು ಕಾರ್ಖಾನೆಗೆ ಹೆಚ್ಚಿನ ಲಾಭವಾಗಲಿದೆ. ಬಳ್ಳಾರಿ ಅಥವಾ ಬೇರೆ ಕಡೆಯಿಂದ ಬರುವಂತಹ ಕೂಲಿ ಕಾರ್ಮಿಕರನ್ನೇ ನಂಬಿಕೊಂಡು ಕೂರುವುದು ತರವಲ್ಲ. ಇದರಿಂದ ಕಟಾವು ತಡವಾಗಬಹುದು. ಈ ಹಿನ್ನೆಲೆಯಲ್ಲಿ ತಾವೇ ಕಡಿದು ಸಾಗಿಸುವ ಕೆಲಸ ಮಾಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಸರ್ಕಾರಿ ಸ್ಯಾಮ್ಯದ ಕಾರ್ಖಾನೆಯಾಗಿರುವ ಕಾರಣ ಉತ್ತಮ ಗುಣಮಟ್ಟದ ಕಬ್ಬನ್ನು ಸಾಗಿಸಿದರೆ ಕಂಪನಿಯನ್ನು ನಷ್ಟದಿಂದ ಹೊರತರಲು ಸಾಧ್ಯವಾಗುತ್ತದೆ. ತೊಂಡೆ ಅಥವಾ ತರಗುಳ್ಳ ಕಬ್ಬನ್ನು ಸಾಗಿಸುವುದು ಬೇಡ. ಇದರಿಂದ ಇಳುವರಿ ಕಡಿಮೆಯಾಗುವುದರ ಜೊತೆಗೆ ನಷ್ಟ ಉಂಟಾಗುತ್ತದೆ ಎಂಬುದನ್ನು ರೈತರು ಮನಗಾಣಬೇಕಾಗಿದೆ. ಕಬ್ಬನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸಾಗಿಸುವುದು ಉತ್ತಮ ಎಂದು ಮನವಿ ಮಾಡಿದರು.

ಈ ವೇಳೆ ಪ್ರಧಾನ ನಿರ್ವಾಹಕ ಅಪ್ಪಾಸಾಹೇಬ್ ಪಾಟೀಲ್, ರಾಸಾಯನಿಕ ತಜ್ಞ ಪಾಪಣ್ಣ, ಉಪ ಮುಖ್ಯ ಅಭಿಯಂತರ ಶಿವಶಂಕರ್, ಆರ್‌ಬಿಟೆಕ್ ಆಡಳಿತ ಮಂಡಳಿಯ ರಾಜೇಶ್ ಸಾನಿಕೊಪ್ಪ ಇತರರು ಇದ್ದರು.