ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಪ್ರೌಢಶಾಲಾ ಶಿಕ್ಷಕರಿಗೆ ನೀಡಬೇಕಿದ್ದ ೧೩ ತಿಂಗಳ ವೇತನದಲ್ಲಿ ಎರಡು ತಿಂಗಳ ವೇತನವನ್ನು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಂಗಳವಾರ ನೀಡಿದರು. ನಾಲ್ವರು ಶಿಕ್ಷಕರು ಹಾಗೂ ಒಬ್ಬ ಡಿ-ಗ್ರೂಪ್ ಸಿಬ್ಬಂದಿಗೆ ವೇತನದ ಚೆಕ್ ವಿತರಿಸಿದರು.ಕಾರ್ಖಾನೆ ಅತಿಥಿಗೃಹದಲ್ಲಿ ಶಿಕ್ಷಕರಿಗೆ ವೇತನದ ಚೆಕ್ ವಿತರಿಸಿ ಮಾತನಾಡಿದ ಸಿ.ಡಿ.ಗಂಗಾಧರ್, ವೇತನವಿಲ್ಲದೆ ಶಿಕ್ಷಕರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದನ್ನು ಅರಿತು ಮಾನವೀಯ ದೃಷ್ಟಿಯಿಂದ ಅವರಿಗೆ ವೇತನ ಪಾವತಿ ಮಾಡಿರುವುದಾಗಿ ಹೇಳಿದರು.
ವಾರದೊಳಗೆ ದಿಶಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನದ ವಿಚಾರ ಚರ್ಚೆಗೆ ಬರಲಿದೆ. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ನಡೆಯನ್ನು ನೋಡಿಕೊಂಡು ಶಿಕ್ಷಕರ ಬಾಕಿ ವೇತನ ಬಿಡುಗಡೆ ಮಾಡುವ ಭರವಸೆ ನೀಡಿದರು.ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿ ಗುತ್ತಿಗೆ ನೀಡುವ ಪ್ರಕ್ರಿಯೆಗೆ ಆಡಳಿತ ಮುಂದಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ಜುಲೈ ತಿಂಗಳಲ್ಲಿ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪ್ರೌಢಶಾಲೆಯ ಅಭಿವೃದ್ಧಿಗೆ ೨೫ ಕೋಟಿ ರು. ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಆ ಹಣ ಐದು ತಿಂಗಳಾದರೂ ಬಂದಿಲ್ಲ. ನಂತರ ಮೈಷುಗರ್ ಕಂಪನಿ ಆಡಳಿತ ಮಂಡಳಿಯಿಂದ ಪತ್ರ ಬರೆದು ಘೋಷಿತ ೨೫ ಕೋಟಿ ರು. ಹಣ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಶಿಕ್ಷಕರ ಬಗ್ಗೆ ಸಹಾನುಭೂತಿ ತೋರಿಸುವಂತೆ ಪತ್ರ ಬರೆದರು. ಈ ವಿಷಯವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದೆವು. ಆಗ ಶಿಕ್ಷಕರ ವೇತನದ ಬಗ್ಗೆ ಪರಾಮರ್ಶೆ ಮಾಡಿ ಮಾನವೀಯತೆ ದೃಷ್ಟಿಯಿಂದ ವೇತನ ಬಿಡುಗಡೆ ಮಾಡುವಂತೆ ಸಚಿವರು ಸೂಚನೆ ನೀಡಿದರು ಎಂದರು.
ಶಿಕ್ಷಕರಿಗೆ ನೀಡಬೇಕಿದ್ದ ೧೩ ತಿಂಗಳ ವೇತನದಲ್ಲಿ ಎರಡು ತಿಂಗಳ ವೇತನ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕುಮಾರಸ್ವಾಮಿ ಅವರು ನಿರ್ಧಾರವನ್ನು ತಿಳಿದುಕೊಂಡು ಬಾಕಿ ವೇತನ ಬಿಡುಗಡೆಗೂ ಕ್ರಮ ವಹಿಸಲಾಗುವುದು. ಕುಮಾರಸ್ವಾಮಿ ಅವರಿಂದ ವೇತನ ಬಿಡುಗಡೆ ಸಾಧ್ಯವಾಗದಿದ್ದರೆ ಒಂದು ತಿಂಗಳೊಳಗೆ ಸಂಪೂರ್ಣವಾಗಿ ಶಿಕ್ಷಕರ ವೇತನ ಪಾವತಿಸಲಾಗುವುದು. ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ನೇರವಾಗಿ ಹೇಳಿದರು.ಮೈಷುಗರ್ ಪ್ರೌಢಶಾಲಾ ಶಿಕ್ಷಕರ ಬಗ್ಗೆ ನಮಗೇನೂ ದ್ವೇಷವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯನ್ನು ಗುತ್ತಿಗೆ ನೀಡಿದ್ದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಸಿಬಿಎಸ್‌ಸಿ, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಆರಂಭವಾಗುತ್ತಿದ್ದವು. ಸುತ್ತಮುತ್ತಲ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡಬಹುದಿತ್ತು. ಆದರೆ, ಮೈಷುಗರ್ ಆಸ್ತಿಯನ್ನೇ ಖಾಸಗಿಯವರಿಗೆ ಬರೆದುಕೊಡುತ್ತಿದ್ದೇವೆಂದು ಜೆಡಿಎಸ್‌ನವರು ಬಿಂಬಿಸಿ ಅಡ್ಡಗಾಲು ಹಾಕಿದರು ಎಂದು ಆರೋಪಿಸಿದರು.
ಜೆಡಿಎಸ್‌ನವರಿಗೆ ಶಾಲೆಯ ಬೆಳವಣಿಗೆ ಬಗ್ಗೆ ನಿಜವಾದ ಇಚ್ಛಾಶಕ್ತಿ ಇದ್ದಿದ್ದರೆ ಕೊಟ್ಟ ಮಾತಿನಂತೆ ೨೫ ಕೋಟಿ ರು. ಹಣ ಬಿಡುಗಡೆ ಮಾಡಬೇಕಿತ್ತು. ಕೊನೆಯ ಪಕ್ಷ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಆಗಮಿಸಿದ್ದಾಗ ಹೇಳಿದ ೧೦ ಕೋಟಿ ರು. ಹಣವನ್ನಾದರೂ ನೀಡಬಹುದಿತ್ತು. ಅವರು ಹೇಳಿದ ಮಾತುಗಳೆಲ್ಲಾ ಈ ತನಕ ಹುಸಿಯಾಗಿದ್ದು, ಅವರ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ದೂರಿದರು.ಶಾಲೆಯ ಶಿಕ್ಷಕರು ಕಳೆದ ೨೫ ವರ್ಷಗಳಿಂದ ೬ ಸಾವಿರ ರು. ಸಂಬಳಕ್ಕೆ ದುಡಿಯುತ್ತಿದ್ದರು. ನಾನು ಅಧ್ಯಕ್ಷನಾದ ಎರಡೇ ತಿಂಗಳಲ್ಲಿ ೧೦ ಸಾವಿರ ರು.ಗೆ ವೇತನ ಹೆಚ್ಚಳ ಮಾಡಿ ಅನುಕೂಲ ಕಲ್ಪಿಸಿದ್ದಾಗಿ ತಿಳಿಸಿದರು.೨೮ ಎಕರೆ ಮೈಷುಗರ್‌ಗೆ ಸೇರಿದ ಜಮೀನು ವಶಕ್ಕೆ ಕ್ರಮ
ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ಸಕ್ಕರೆ ಕಂಪನಿ ವ್ಯಾಪ್ತಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದ ೭.೧೦ ಎಕರೆ ವಾಣಿಜ್ಯ ಜಮೀನು ಹಾಗೂ ವ್ಯವಸಾಯದ ೨೦.೨೯ ಎಕರೆ ಸೇರಿ ಒಟ್ಟು ೨೭.೩೯ ಎಕರೆ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
ಕಂಪನಿಗೆ ಸೇರಿದ ಆಸ್ತಿಯನ್ನು ಹಲ್ಲೇಗೆರೆ ಗ್ರಾಮ ಪಂಚಾಯ್ತಿಯವರು ೧೯೬೨ರಲ್ಲಿ ಕ್ರಯಕ್ಕೆ ಪಡೆದು ನೋಂದಣಿಯಾಗಿರಲಿಲ್ಲ. ೧.೦೭ ಎಕರೆ ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ನೋಂದಣಿ ಮಾಡಿಕೊಡಲಾಗಿತ್ತು. ನಂತರದಲ್ಲಿ ಅಕ್ರಮವಾಗಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ, ವ್ಯವಸಾಯ ಮಾಡುತ್ತಿರುವುದು ಕಂಡುಬಂದಿತು. ಆಸ್ತಿ ಸಂರಕ್ಷಣೆ ಉದ್ದೇಶದಿಂದ ಜಮೀನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಪ್ರಸಕ್ತ ಸಾಲಿನಲ್ಲಿ ೧.೨೦ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ೭೭ ಸಾವಿರ ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಒಟ್ಟು ೭ ಸಾವಿರ ಮೆಟ್ರಿಕ್ ಟನ್ ಕಾಕಂಬಿ ಉತ್ಪಾದನೆ ಮಾಡಲಾಗಿದೆ. ಈ ಸಾಲಿನಲ್ಲಿ ಸಕ್ಕರೆಯನ್ನು ಪ್ರತಿ ಕ್ವಿಂಟಾಲ್‌ಗೆ ೩೭೬೦ ರು. ದಾಖಲೆ ಬೆಲೆಗೆ ಮಾರಾಟ ಮಾಡಲಾಗಿದೆ. ೫ ಸಾವಿರ ಮೆಟ್ರಿಕ್ ಟನ್ ಕಾಕಂಬಿಯನ್ನು ಪ್ರತಿ ಟನ್‌ಗೆ ೧೧,೪೦೦ ರು.ನಂತೆ ಕೊಪ್ಪ ಎನ್‌ಎಸ್‌ಎಲ್ ಷುಗರ್ಸ್‌ಗೆ ಹಾಗೂ ಕಾಕಂಬಿ ೧೦೦೦ ಮೆಟ್ರಿಕ್ ಟನ್‌ಗೆ ೧೨,೨೫೦ ರು.ನಂತೆ ಕೆ.ಎಂ.ದೊಡ್ಡಿಯ ಚಾಂಷುಗರ್ಸ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು.
ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ಶೇ.೬.೫೦ರಷ್ಟಿದ್ದು, ಕಬ್ಬು ಪೂರೈಸಿದ ರೈತರಿಗೆ ಸೆಪ್ಟೆಂಬರ್‌ವರೆಗೆ ಹಣ ಪಾವತಿಸಲಾಗಿದೆ. ೨೦ ಸಾವಿರ ಮೆಟ್ರಿಕ್ ಟನ್ ಕಬ್ಬಿಗೆ ನ.೨೦ರೊಳಗೆ ಹಣ ಪಾವತಿಸುವುದಾಗಿ ಹೇಳಿದರು.ಮುಖಂಡ ಚಂದಗಾಲು ವಿಜಯಕುಮಾರ್ ಸಹ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))