ಸಾರಾಂಶ
ಪಿಡಿಒ ಆಗಿ ಉತ್ತಮ ಕಾರ್ಯನಿರ್ವಹಣೆ ಮೂಲಕ ತಮ್ಮ ಅವಧಿಯಲ್ಲಿ ಮೂರು ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಕಾರಣಿಕರ್ತರಾದ ಶಿರಸಿ ತಾಲೂಕಿನ ದೇವನಳ್ಳಿ ಗ್ರಾಪಂ ಪಿಡಿಒ ಕುಮಾರ ಚನ್ನಪ್ಪ ವಾಸನ್ ಅವರಿಗೆ ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ದೊರೆತಿದೆ.
ಕಾರವಾರ: ಪಿಡಿಒ ಆಗಿ ಉತ್ತಮ ಕಾರ್ಯನಿರ್ವಹಣೆ ಮೂಲಕ ತಮ್ಮ ಅವಧಿಯಲ್ಲಿ ಮೂರು ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಕಾರಣಿಕರ್ತರಾದ ಶಿರಸಿ ತಾಲೂಕಿನ ದೇವನಳ್ಳಿ ಗ್ರಾಪಂ ಪಿಡಿಒ ಕುಮಾರ ಚನ್ನಪ್ಪ ವಾಸನ್ ಅವರಿಗೆ ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ (ಡಿಸೆಂಬರ್) ಪ್ರಶಸ್ತಿಯನ್ನು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಬುಧವಾರ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಮಾರ ವಾಸನ್, ಗ್ರಾಮೀಣ ಜನರಿಗೆ ಅತೀ ಅವಶ್ಯಕ ಮೂಲಭೂತ ಸೌಕರ್ಯ ಒದಗಿಸುವ ಮಹತ್ತರ ಜವಾಬ್ದಾರಿ ಪಿಡಿಒ ಮೇಲಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಗಳು ಕೆಲಸದಲ್ಲಿ ಬದ್ಧತೆ ತೋರುವ ಮೂಲಕ ಮೇಲಾಧಿಕಾರಿಗಳ ಮಾರ್ಗದರ್ಶನ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಜನಪರ ಯೋಜನೆಗಳನ್ನು ನೀತಿ, ನಿಯಮಗಳ ಪ್ರಕಾರ ಜನರಿಗೆ ತಲುಪಿಸಲು ಶ್ರಮಿಸಬೇಕು ಎಂದರು.
ಈ ರೀತಿಯ ಕಾರ್ಯ ನಿರ್ವಹಣೆಯಿಂದ ಮಾತ್ರ ಪ್ರಶಸ್ತಿ ಹಾಗೂ ಪುರಸ್ಕಾರ ಲಭಿಸಲು ಸಾಧ್ಯವಿದೆ. ನನ್ನ ಸೇವೆ ಗುರುತಿಸಿರುವ ಜಿಪಂ ಸಿಇಒ, ತಾಪಂ ಇಒ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷದ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ ಇದ್ದರು.
ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ: ಕುಮಾರ ವಾಸನ್ ಡಿಎಡ್, ಬಿಎ ಪದವೀಧರರಾಗಿದ್ದು, 2010ರಲ್ಲಿ ಪಿಡಿಒ ಸೇವೆ ಪ್ರಾರಂಭಿಸಿದ್ದಾರೆ. ಶಿರಸಿ ತಾಲೂಕಿನ ಹಲವು ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ದೇವನಳ್ಳಿಯಲ್ಲಿ ಕಾಯಂ ಹಾಗೂ ಉಂಚಳ್ಳಿ ಗ್ರಾಪಂನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕಾರ್ಯಾವಧಿಯ 2013-14ರಲ್ಲಿ ಬದನಗೋಡ ಗ್ರಾಪಂ, 2014-15, 2015-16ರಲ್ಲಿ ಇಟಗುಳಿ ಗ್ರಾಪಂಗೆ ಸತತ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಶೇ. 100ರಷ್ಟು ತೆರಿಗೆ ವಸೂಲಾತಿ ಸಾಧನೆ, ಸಾಮಾಜಿಕ ಪರಿಶೋಧನಾ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನು ಶೇ. 100ರಷ್ಟು ತಿರುವಳಿಗೊಳಿಸುವ ಕಾರ್ಯಸಾಧನೆ ಮಾಡಿದ್ದಾರೆ.ಉದ್ಯೋಗಖಾತ್ರಿ ಯೋಜನೆಯಡಿ ಹಲವು ಕೆಲಸ ಮಾಡಿಸಿದ್ದಾರೆ.
2023-24ನೇ ಸಾಲಿನಲ್ಲಿ ದೇವನಳ್ಳಿ ಗ್ರಾಪಂಗೆ ನೀಡಲಾಗಿದ್ದ 7785 ಮಾನವ ದಿನಗಳ ಗುರಿ ಸಾಧನೆಗೆ ಪೂರಕವಾಗಿ ಪ್ರಸಕ್ತ ವರ್ಷದ ಜ. 8ರ ಅಂತ್ಯಕ್ಕೆ 15,153 ಮಾನವ ದಿನಗಳ ಗುರಿ ಸಾಧಿಸಿದ್ದು, ವಾರ್ಷಿಕ ಗುರಿಗೆ ಅನುಗುಣವಾಗಿ ಶೇ. 194.64 ರಷ್ಟು ಗುರಿ ಸಾಧಿಸಲಾಗಿದೆ.