ಇ ಸ್ವತ್ತಿಗಾಗಿ ಜನರ ರಕ್ತ ಹೀರುತ್ತಿರುವ ಪಿಡಿಒಗಳು: ಶಾಸಕ ಕೃಷ್ಣನಾಯ್ಕ

| Published : Aug 19 2024, 12:46 AM IST

ಇ ಸ್ವತ್ತಿಗಾಗಿ ಜನರ ರಕ್ತ ಹೀರುತ್ತಿರುವ ಪಿಡಿಒಗಳು: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಕೆಲಸ ಮಾಡದ ಅಧಿಕಾರಿಗಳ ಕುತ್ತಿಗೆಗೆ ಕೈ ಹಾಕಿ, ಹೊರಕ್ಕೆ ತಳ್ಳಬೇಕಾಗುತ್ತದೆ.

ಹೂವಿನಹಡಗಲಿ: ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ನೀಡಲು ಪಿಡಿಒಗಳು ಜನರ ರಕ್ತ ಹೀರುತ್ತಿದ್ದಾರೆ. ತಮಗಿಷ್ಟ ಬಂದಂತೆ ನಿಯಮಗಳನ್ನು ಮೀರಿ ಕಾಮಗಾರಿ ಮಾಡಿ, ಹಣ ಲೂಟಿ ಮಾಡುತ್ತಿದ್ದಾರೆ. ಜನರ ಕೆಲಸ ಮಾಡದ ಅಧಿಕಾರಿಗಳ ಕುತ್ತಿಗೆಗೆ ಕೈ ಹಾಕಿ, ಹೊರಕ್ಕೆ ತಳ್ಳಬೇಕಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಪಿಡಿಒಗಳು, ಅಧಿಕಾರಿಗಳ ವಿರುದ್ಧ ಗರಂ ಆದರು.

ಇಲ್ಲಿನ ತಾಪಂ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಪಂ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಿಡಿಒ ಇ-ಸ್ವತ್ತು ಕೊಡುತ್ತಿಲ್ಲ. ತಿಂಗಳುಗಟ್ಟಲೇ ಕಚೇರಿಗೆ ಅಲೆದರೂ ಯಾವ ಪ್ರಯೋಜನವಿಲ್ಲ ಎಂದು ಹಳ್ಳಿ ಜನ ನಮಗೆ ಹಗಲು-ರಾತ್ರಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಈ ಕುರಿತು ಈ ಹಿಂದೆ ಜನರ ಮನೆ ಬಾಗಿಲಿಗೆ ಹೋಗಿ ಇ-ಸ್ವತ್ತು ನೀಡಬೇಕೆಂದು ಹೇಳಿದ್ದರೂ ಯಾವ ಗ್ರಾಪಂನಲ್ಲೂ ನಡೆಯುತ್ತಿಲ್ಲ. ಈ ಕುರಿತು ಆಂದೋಲನ ನಡೆಯುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಹೀಗಾದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಬರಬೇಕಾಗುತ್ತದೆ ಎಂದು ಹೇಳಿದರು.

ದಾಸನಹಳ್ಳಿ ಗ್ರಾಪಂಗೆ 6 ಸಿಬ್ಬಂದಿ ಮಂಜೂರು ಮಾಡಲಾಗಿದೆ. ಇವರಿಗೆ ಸರ್ಕಾರದಿಂದ ವೇತನ ಬರುತ್ತಿದೆ. ಆದರೆ ಕೆಲಸ ಮಾಡುವವರು ಮಾತ್ರ 5 ಜನರಿದ್ದಾರೆ. ಇದರಲ್ಲಿ ಒಂದೇ ಹೆಸರಿನ ವ್ಯಕ್ತಿ ತನ್ನ ಎರಡು ರೀತಿಯ ಹೆಸರುಗಳನ್ನು ಹಾಜರಾತಿ ಪುಸ್ತಕದಲ್ಲಿ ಬರೆದು 2021ರಿಂದ ಎರಡು ವೇತನ ಪಡೆಯುತ್ತಿದ್ದಾರೆ. ಜಿಪಂ, ತಾಪಂ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಇಷ್ಟೊಂದು ಅಕ್ರಮ ನಡೆದರೂ ಸುಮ್ಮನೆ ಇದ್ದರೆ ಸರಿಯಲ್ಲ. ಈ ಕುರಿತು ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒ ಸೂಚಿಸಿದರು.

ಈ ಹಿಂದೆ ಗ್ರಾಪಂ 15ನೇ ಹಣಕಾಸಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪೌಂಡ್‌, ಕುಡಿಯುವ ನೀರು, ಕೊಳವೆಬಾವಿ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿರುವೆ. ಆದರೆ ಹಿರೇಮಲ್ಲನಕೆರೆ ಗ್ರಾಪಂನಲ್ಲಿ 15ನೇ ಹಣಕಾಸಿನ ಕ್ರಿಯಾ ಯೋಜನೆ ಮಂಜೂರಾಗುವ ಮೊದಲೇ ಆ ಗ್ರಾಪಂ ಸದಸ್ಯರು ಗುಣಮಟ್ಟ ಇಲ್ಲದ ಸಿಸಿ ಕ್ಯಾಮರಾ ಅಳವಡಿಸಿ, ಪಿಡಿಒಗೆ ಬಿಲ್‌ ಬರೆಯುವಂತೆ ದುಂಬಾಲು ಬಿದ್ದಿದ್ದಾರೆ. ನೀವು ಏನು ಮಾಡುತ್ತಿದ್ದೀರಿ, ಪಿಡಿಒಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಜಿಪಂಗೆ ಬಂದು ಅಲ್ಲಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಪಂ ಯೋಜನಾಧಿಕಾರಿ ಅಶೋಕ ತೋಟದ್‌ ವಿರುದ್ಧ ಶಾಸಕರು ಗರಂ ಆದರು.

ಪಿಡಿಒಗಳಿಗೆ ಕಾನೂನಿನ ಭಯವಿಲ್ಲ. ಹಳ್ಳಿಗಳಲ್ಲಿ ಎನ್‌ಎ ಆದ ಖಾಲಿ ಸೈಟ್‌ಗಳಿಗೆ ಇ-ಸ್ವತ್ತು ನೀಡುತ್ತಿದ್ದಾರೆ. ಆದರೆ ಅಲ್ಲಿ ಈವರೆಗೂ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಇಂತಹ ಅಕ್ರಮ ನಡೆದರೂ ಯಾರು ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಸದ್ದು ಮಾಡಿದ ಕನ್ನಡಪ್ರಭ ವರದಿ: ತಾಲೂಕಿನ 26 ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೂ 20 ಕಸ ವಿಲೇವಾರಿ ಘಟಕ ನಿರ್ಮಾಣವಾಗಿತ್ತು. ಆದರೆ ಕೇವಲ 8 ಘಟಕ ಮಾತ್ರ ಇವೆ. ಕಸ ವಿಲೇವಾರಿ ಜನರಲ್ಲಿಯೂ ಜಾಗೃತಿ ಬೇಕಿದೆ. ಇಂದಿಗೂ ಚರಂಡಿಗೆ ಕಸ ಹಾಕುತ್ತಿದ್ದಾರೆ. ಹಗರನೂರು ಗ್ರಾಪಂನಲ್ಲಿ ಶೇ.10 ಮಾತ್ರ ಕಸ ವಿಲೇವಾರಿ ತೆರಿಗೆ ಸಂಗ್ರಹವಾಗುತ್ತಿದೆ. ಉಳಿದ ಕಡೆಗೆ ಇನ್ನು ಬಾಕಿ ಇದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ. ಕನ್ನಡಪ್ರಭದ ವಿಶೇಷ ವರದಿಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈ ಕುರಿತು ಪಿಡಿಒಗಳ ಸಭೆ ಕರೆದು ಕ್ರಮಕ್ಕೆ ಮುಂದಾಗುತ್ತೇವೆಂದು ತಾಪಂ ಇಒ ಉಮೇಶ ಸಭೆಯಲ್ಲಿ ಹೇಳಿದರು.

ತಾಪಂ ಕೆಡಿಪಿ ಮತ್ತು ಸಾಮಾನ್ಯ ಸಭೆಗೆ ಗೈರಾದ, 9 ಜನ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವಂತೆ ತಾಪಂ ಆಡಳಿತಾಧಿಕಾರಿ ಅಶೋಕ ತೋಟದ್‌ ತಾಪಂ ಇಒಗೆ ಸೂಚಿಸಿದರು.

ತಾಪಂನ ಬಿ.ಎಂ.ಶ್ವೇತಾ ಸ್ವಾಗತಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.