ಶಾರದೆಯ ಅನುಗ್ರಹವಿದ್ದರೆ ಶಾಂತಿ, ನೆಮ್ಮದಿ ಜೀವನ: ಡಾ. ಮಾಧವಿ ವಿಜಯ

| Published : Oct 11 2024, 11:47 PM IST

ಸಾರಾಂಶ

ನಿವೃತ್ತ ಅಧ್ಯಾಪಕರಾದ ಶಂಕರ ಮಾಸ್ಟರ್ ಕುಂಟಲಗುಳಿ ಅವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಚಿತ್ರಕಲೆಯಲ್ಲಿ ಸಾಧನೆ ಮಾಡಿದ ರೋಹಿತ್ ಪಜೀರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭುವನ್, ತನ್ವಿ ಬಂಗೇರ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಾರದಾ‌ಮಾತೆಯ ಅನುಗ್ರಹವಿದ್ದರೆ ಸುಖ, ಶಾಂತಿ ನೆಮ್ಮದಿಯ ಜೀವನ ನಮ್ಮದಾಗುವುದು. ನವರಾತ್ರಿ ಹಬ್ಬವು ದೇವತೆಗಳ ಆರಾಧನೆಯೊಂದಿಗೆ ನಮ್ಮಲ್ಲಿ ಉತ್ತಮ ಚಿಂತನೆಯನ್ನು ಬೆಳೆಸುತ್ತದೆ ಎಂದು ವೈದ್ಯೆ ಡಾ. ಮಾಧವಿ ವಿಜಯ್ ಕುಮಾರ್‌ ಹೇಳಿದರು.

ಅವರು ಬುಧವಾರ ಕೊಣಾಜೆ ಸಪ್ತಸ್ವರ ಕಲಾ ತಂಡ ಸೇವಾ ಟ್ರಸ್ಟ್ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸಹಕಾರದೊಂದಿಗೆ‌ 20ನೇ ವರ್ಷದ ‘ಕೊಣಾಜೆ ಶಾರದೋತ್ಸವ’ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ, ನೃತ್ಯ ಸೇರಿದಂತೆ ನಮ್ಮಲ್ಲಿ 64 ಕಲಾ ಪ್ರಕಾರಗಳಿವೆಯಂತೆ. ಕೊಣಾಜೆಯ ಸಪ್ತಸ್ವರ ಕಲಾತಂಡವು ಧಾರ್ಮಿಕ ಆಚರಣೆಯೊಂದಿಗೆ ಯಕ್ಷಗಾನ, ಭರತನಾಟ್ಯ, ಸಂಗೀತ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ. ಜೊತೆಗೆ ಸಮಾಜಸೇವೆಯಲ್ಲೂ ಮೂಂಚೂಣಿಯಲ್ಲಿದ್ದು ಮಾದರಿ ಸಂಸ್ಥೆಯಾಗಿ ಗುರುತಿಸಿದೆ ಎಂದರು.

ಕೊಣಾಜೆ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯತನವು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ.‌ ಧಾರ್ಮಿಕತೆಯೊಂದಿಗೆ ಸಮಾಜಮುಖಿ ಚಿಂತನೆಗಳು ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದ ಅವರು, ಜೀವನದಲ್ಲಿ ಗಳಿಸಿದ್ದರಲ್ಲಿ ಸ್ವಲ್ಪ ಭಾಗವಾದರೂ ಸಮಾಜಕ್ಕೆ ಅರ್ಪಿಸುವ ಮನೋಭಾವನೆಯೊಂದಿಗೆ ಇಲ್ಲಿಯ ಸಮಿತಿಯ ಪದಾಧಿಕಾರಿಗಳು ದುಡಿಯುತ್ತಿರುವುದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ ಮಲ್ಯ, ಉದ್ಯಮಿ ದಿವ್ಯರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಆಶ್ರಿತ್ ನೋಂಡ, ಉದ್ಯಮಿ ವಿಜೇಶ್ ನಾಯ್ಕ್ ನಾರ್ಯಗುತ್ತು, ಕೊಣಾಜೆ ಪಂಚಾಯತಿ ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಡಿಗಾರ್, ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಸಪ್ತ ಸ್ವರ ಕಲಾತಂಡದ ಅಧ್ಯಕ್ಷ ರಿತೇಶ್ ಹೊಸಮನೆ, ಭುವನೇಶ್ವರಿ ಮಾತೃ ಮಂಡಳಿಯ ಲಲಿತಾ ಪುಳಿಂಚಾಡಿ, ಸಪ್ತಸ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾದ ಸುರೇಂದ್ರ ಬೊಳ್ಳೆಕುಮೇರು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರಾದ ಶಂಕರ ಮಾಸ್ಟರ್ ಕುಂಟಲಗುಳಿ ಅವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಚಿತ್ರಕಲೆಯಲ್ಲಿ ಸಾಧನೆ ಮಾಡಿದ ರೋಹಿತ್ ಪಜೀರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭುವನ್, ತನ್ವಿ ಬಂಗೇರ ಅವರನ್ನು ಗೌರವಿಸಲಾಯಿತು.

ಸಮಿತಿಯ ಗೌರವ ಸಲಹೆಗಾರ ರವೀಂದ್ರ ರೈ ಕಲ್ಲಿಮಾರ್‌ ಸ್ವಾಗತಿಸಿದರು. ನಾರಾಯಣ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶರತ್ ಪುಳಿಂಚಾಡಿ ವಂದಿಸಿದರು. ಭಾಸ್ಕರ ಅಂಗಣೆಮಾರು ಕಾರ್ಯಕ್ರಮ ನಿರೂಪಿಸಿದರು. ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಕೊಣಾಜೆ ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.