ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ

| Published : Nov 17 2024, 01:16 AM IST

ಸಾರಾಂಶ

ಹೊನ್ನಾಳಿ : ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ನಡೆದರೆ ಬದುಕು ಬಂಗಾರಗೊಳ್ಳುತ್ತದೆ. ಮರೆತು ನಡೆದರೆ ಬದುಕು ಬಂಧನಕಾರಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಹೊನ್ನಾಳಿ : ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ನಡೆದರೆ ಬದುಕು ಬಂಗಾರಗೊಳ್ಳುತ್ತದೆ. ಮರೆತು ನಡೆದರೆ ಬದುಕು ಬಂಧನಕಾರಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭೌದ್ಧಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ಸದಾಚಾರ ಬೆಳೆದು ಬರಬೇಕು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಜೀವನ ಮೌಲ್ಯಗಳನ್ನು ನಿರ್ಲಕ್ಷ್ಯಿಸಿದರೆ ಅಧಃಪತನ ನಿಶ್ಚಿತ. ಜ್ಞಾನ ಕ್ರಿಯಾತ್ಮಕ ಧರ್ಮಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯದಿರುವುದೇ ಇಂದಿನ ಆವಾಂತರಗಳಿಗೆ ಕಾರಣ ಎಂದರು. ಸುಳ್ಳಿಗೆ ಸಾವಿರ ಮಿತ್ರರು. ಆದರೆ ಸತ್ಯಕ್ಕೆ ಎಲ್ಲರೂ ಶತ್ರುಗಳೇ. ಜನ ಸುಳ್ಳನ್ನು ನಂಬುವಷ್ಟು ಸತ್ಯ ನಂಬುವುದಿಲ್ಲ. ಸತ್ಯ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗುರುವಿನ ಕೃಪೆಯಿಂದ ಬದುಕು ಸರಿದಾರಿಯಲ್ಲಿ ಸಾಗುತ್ತದೆ. ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ. ಈ ಕ್ರಿಯಾಶೀಲತೆ ಬರುವುದು ಧರ್ಮದಿಂದ ಮಾತ್ರ ಎಂದರು.

ವೇದಿಕೆಯಲ್ಲಿ ರಾಂಪುರದ ಶಿವಕುಮಾರ ಹಾಲಸ್ವಾಮೀಜಿ, ಸಾಧುವೀರಶೈವ ಸಮಾಜದ ಹೊನ್ನಾಳಿ ತಾಲೂಕು ಅಧ್ಯಕ್ಷ ಎಚ್.ಎ.ಗದ್ದೀಗೇಶ್, ಬೇಡ ಜಂಗಮ ಸಮಾಜ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಬೈರನಹಳ್ಳಿ ಪಂಚಾಕ್ಷರಯ್ಯ , ಕೆ.ವಿ.ಬಸವನಗೌಡ , ಬಿ.ಸಿ.ನಾಗರಾಜ್‌ ಬಾಳೆಕಾಯಿ , ಕೆ.ಸಿ.ಚಂದ್ರಪ್ಪ, ಶಿಕ್ಷಕಿ ಬೈರನಹಳ್ಳಿ ಸುಧಾ ಪಂಚಾಕ್ಷರಯ್ಯ ಎಚ್.ಪಿ.ಪರಮೇಶ ಹಿತ್ತಲಮನೆ, ಅನುಷಾ, ಮಲ್ಲಿಕಾರ್ಜುನ ಸೇರಿದಂತೆ ವಿವಿಧ ದೇಗುಲಗಳ ಸಮಿತಿಯ ಪದಾಧಿಕಾರಿಗಳು ಇದ್ದರು. ಇದಕ್ಕೂ ಮೊದಲು ಗ್ರಾಮದ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ, ಬಸವೇಶ್ವರ ಸಾಮಿಯ ನೂತನ ಶಿಲಾ , ಉತ್ಸವ ಮೂರ್ತಿ, ದುರ್ಗಾಂಬಿಕಾ ದೇವಿ, ಕುಕ್ಕುವಾಡೇಶ್ವರಿ ದೇವಿ, ಕರಿಯಮ್ಮ, ಮಾರಿಯಮ್ಮ ಈಶ್ವರ ಬಸವೇಶ್ವರ, ಮೈಲಾರಲಿಂಗೇಶ್ವರ ಧ್ವಜ ಸ್ತಂಭ, ದೇಗುಲಗಳ ಪ್ರವೇಶ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಶಿಖರ ಕಳಸಾರೋಹಣ ಕಾರ್ಯಕ್ರಮ ನಡೆದವು.