ಸಂಪತ್ತಿನಿಂದ ಶ್ರೀಮಂತಿಕೆ ಅಳೆದರೆ ಶಾಂತಿ ನೆಲೆಗೊಳ್ಳಲು ಸಾಧ್ಯವಿಲ್ಲ

| Published : Jan 02 2025, 12:33 AM IST

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆದ ವರ್ಷದ ಹರ್ಷ ಕಾರ್ಯಕ್ರಮದಲ್ಲಿ ನಾಡೋಜ ಗೋರು ಚನ್ನಬಸಪ್ಪ ಹಾಗೂ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಂಪತ್ತಿನ ಮೂಲಕ ಶ್ರೀಮಂತಿಕೆಯನ್ನು ಅಳೆಯುತ್ತಿರುವುದರಿಂದ ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಬದುಕಿನಲ್ಲಿರುವ ಆವಗುಣಗಳನ್ನು ಕಳೆದುಕೊಂಡರೆ ಅರ್ಥಪೂರ್ಣವಾದ ಜೀವನವನ್ನು ನಡೆಸುವ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದೊಯ್ಯಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಹೊಸ ವರ್ಷ ಆಚರಣೆ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ವರ್ಷದ ಹರ್ಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇವರು ಎಂದರೆ ನಮ್ಮಲ್ಲಿರುವ ಚೈತನ್ಯ. ಮಣ್ಣಿಗೆ ಸಂಸ್ಕಾರ ಕೊಟ್ಟಾಗ ಸುಂದರ ಮಡಿಕೆಯಾಗುವಂತೆ ಮಾನವನಿಗೆ ಸಂಸ್ಕಾರ ಕೊಟ್ಟಾಗ ಆತನೇ ದೇವರಾಗುತ್ತಾನೆ. ಇಂದು ಜನರು ಸಂಕಷ್ಠ ಬಂದಾಗ ದೇವರ ಸ್ಮರಣೆ ಮಾಡುತ್ತಾರೆ ಆದರೆ ಅದು ಸ್ಥಾವರ ದೇವರು ಅದಕ್ಕೆ ವರ ಅಥವಾ ಶಾಪ ಕೊಡುವ ಶಕ್ತಿಯಿಲ್ಲ. ದೇವರು, ದೆವ್ವ ಬೇರೆ ಬೇರೆಯಲ್ಲ ನಮ್ಮೋಳಗಿನ ಗುಣಗಳೇ ಅವು. ಉಸಿರಾಟದ ಪ್ರತಿ ಅವಧಿಯಲ್ಲೂ ಕೂಡ ಭಗವಂತನ ಸ್ಮರಣೆ ಮಾಡಿದರೆ ಮನುಷ್ಯ ತನ್ನ ಕಾರ್ಯದಲ್ಲಿ ಯಶಸ್ವಿಯಾಗತ್ತಾನೆ ಮತ್ತು ಸನ್ಮಾರ್ಗದಲ್ಲೂ ಸಾಗುತ್ತಾನೆ. ಇಂದು ಮನುಷ್ಯ ಹೆಚ್ಚು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ತನ್ನೊಳಗಿನ ಕ್ರೂರ ಮೃಗಗಳನ್ನು ನಾಶಮಾಡುವಂತ ಪ್ರಯತ್ನ ಮಾಡಬೇಕು ಎಂದರು.

ಮಠದ ಗುರು ಮೂಡನಾಗಿದ್ದರೆ, ಬ್ರಷ್ಠನಾಗಿದ್ದರೆ, ದುಷ್ಠನಾಗಿದ್ದರೆ ಅಂತವನಿಂದ ಸಮಾಜಕ್ಕೆ ಏನು ಸಂದೇಶ ಕೊಡಬಲ್ಲ ಇಂದು ಸ್ವಾಮಿಗಳು ಮೌಡ್ಯಗಳ ಕೂಪದಲ್ಲಿ ಮುಳುಗಿ ಏಳುತ್ತಿದ್ದಾರೆ ಅಂತವನಿಂದ ಸಮಾಜ ಹೇಗೆ ಪರಿವರ್ತನೆ ಆಗಬಲ್ಲದು ಎಂಬುದನ್ನು ಅರಿಯಬೇಕಿದೆ. ಒಳ್ಳೆಯವರು ಕೆಟ್ಟವರು ಎಲ್ಲಾ ಕಡೆ ಇದ್ದಾರೆ ಸಮಾಜ ಕೆಟ್ಟಿದೆ ಎಂದು ನಿರಾಶಾವಾದದ ಮಾತುಗಳನ್ನಾಡುವುದು ಬೇಡ ಒಳ್ಳೆಯದನ್ನು ಗುರುತಿಸಿ ಗೌರವಿಸಿದರೆ ಸಮಾಜ ತಂತಾನೆ ಸರಿದಾರಿಗೆ ಬರುತ್ತದೆ ಎಂದರು.

ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಹೊಸದುರ್ಗದಲ್ಲಿ 25-30 ವಿಕೃತ ಪಾರ್ಟಿಗಳು ಇಂದು ನಡೆಯುತ್ತಿವೆ ಒಬ್ಬೊಬ್ಬ ಎಂಎಲ್‌ಎ ಬಂದಾಗ ನಾಲ್ಕು ನಾಲ್ಕು ಕ್ಲಬ್‌ಗಳ ಸ್ಥಾಪನೆ ಮಾಡುತ್ತಾರೆ.

ಈ ರೀತಿ ಸಮಾಜವನ್ನು ವಿಕೃತಗೊಳಿಸುತ್ತಾ ವಿನಾಸ ಮಾಡಿದರೆ ಗುರುಗಳು, ಪ್ರಜ್ಞಾವಂತರು, ಸಾಹಿತಿಗಳು ನಿಮ್ಮ ಮುಂದೆ ಹುಚ್ಚರಾಗಿ ಕಾಣುತ್ತಾರೆ. ಸಮಾಜ ಕೆಡುತ್ತಿಲ್ಲ ಸಮಾಜದಲ್ಲಿ ವ್ಯವಸ್ಥೆ ಕೆಡುತ್ತಿದೆ. ಅನಾಗರೀಕ ಜಗತ್ತಿನಲ್ಲಿ ನಾಗರೀಕರು ಅವರನ್ನು ಕಾಯುವ ಮಟ್ಟಕ್ಕೆ ಸರ್ಕಾರದ ಯೋಜನೆ, ಯೋಚನೆಗಳು ಬಂದಾಗ ದೇಶದ ಐಕ್ಯತೆ ಸಮಗ್ರತೆ ಹೇಗೆ ಸಾಧ್ಯ ಎಂದರು.

ಜಪಾನ್‌ ಹಾಗೂ ದುಬೈ ನಂತಹ ದೇಶದಲ್ಲಿಯೂ ಸರ್ಕಾರಗಳಿವೆ ಆದರೆ ಅಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ಕೊಟ್ಟಿದ್ದಾರೆ ಆದರೆ ನಮ್ಮ ಸರ್ಕಾರಗಳು 2-3 ಸಾವಿರ ಉಚಿತ ಕೊಟ್ಟು ಕುಡಿದುಕೊಳ್ಳಿ ಎಂದು ಕೊಟ್ಯಾಂತರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಇಂದು ಶಿಕ್ಷಣ ವ್ಯಾಪಾರವಾಗಿದೆ, ಸಮಾಜ ಎನ್ನುವುದು ಉದ್ಯೋಗ ವಾಗಿದೆ ರಾಜಕಾರಣ ಧವಲತ್ತು ಆಗಿದೆ. ಇವತ್ತು ನಮ್ಮ ಸರ್ಕಾರದಲ್ಲಿ ಸಜ್ಜನ ಎಂಎಲ್‌ಎ ಯಾರು ಇಲ್ಲ . ಹಣ ಕೊಟ್ಟು ಗೆದ್ದು ರಾಜಕೀಯ ನಾಯಕರಾಗುತ್ತಾರೆ . ಇಂತಹ ರಾಜಕಾರಣಿಗೆ ಅಧಿಕಾರಿಗಳು ಹಣ ಕೊಟ್ಟು ಆಯ್ದ ಸ್ಥಳಗಳಿಗೆ ಬರುತ್ತಾರೆ ಇಂತವ ವ್ಯಸ್ಥೆಯಲ್ಲಿ ಸಮಾಜದ ಹೇಗೆ ಅಭಿವೃದ್ದಿಯಾಗಲು ಸಾಧ್ಯ ಎಂದರು.

ಚಿಂತಕ ಚಟ್ನಳ್ಳಿ ಮಹೇಶ್‌ ಉಪನ್ಯಾಸ ನಿಡಿದರು. ಇದೇ ವೇಳೆ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ ರು ಚನ್ನಬಸಪ್ಪ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃಷ್ಣಮೂರ್ತಿ ಬಿಳಿಗೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಡಾ. ಪೊಲೀಸ್ ಪಾಟೀಲ್ ಬನಹಟ್ಟಿ ಮತ್ತು ಅವರ ತಂಡದವರಿಂದ ಲಾವಣಿ ಪದಗಳನ್ನು ಹಾಡುವುದರ ಮೂಲಕ ಜನರನ್ನು ರಂಜಿಸಿದರು . ಅದೇ ರೀತಿ ಹಾಸ್ಯ ಕಾರ್ಯಕ್ರಮದಲ್ಲಿ ರಿಚರ್ಡ್ ಲೂಯಿಸ್, ಮೈಸೂರಿನ ಮಿಮಿಕ್ರಿ ಗೋಪಿ ಹಾಗೂ ಸತ್ಯ ಬೆಂಗಳೂರು ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮಕ್ಕೂ ಮುನ್ನಾ ಸಾಣೇಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರು ನೃತ್ಯ ರೂಪಕ ನಡೆಸಿಕೊಟ್ಟರು. ಶಿವಕುಮಾರ ಕಲಾತಂಡದ ನಾಗರಾಜ್ ಹೆಚ್ ಎಸ್,ಕೆ ಜ್ಯೋತಿ ಹಾಗೂ ತಬಲಾ ಸಾಥಿ ಶರಣ್ ಕುಮಾರ ರವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.