ಸಂಗನಾಳ ಗ್ರಾಮದಲ್ಲಿ ಶಾಂತಿಸಭೆ

| Published : Aug 19 2024, 12:54 AM IST

ಸಾರಾಂಶ

ಸಂಗನಾಳ ಗ್ರಾಮದಲ್ಲಿ ದಲಿತ ವ್ಯಕ್ತಿಯೋರ್ವನನ್ನು ಕಟಿಂಗ್ ಮಾಡಲು ನಿರಾಕರಣೆ ಮಾಡಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕತ್ತರಿಯಿಂದಲೇ ಇರಿದು ಕೊಲೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ ಗ್ರಾಮದ ದುರಗಮ್ಮನ ಗುಡಿಯಲ್ಲಿ ಶಾಂತಿಸಭೆ ನಡೆಸಲಾಯಿತು.

ಹಳ್ಳಿ ಹಳ್ಳಿಯಲ್ಲಿಯೂ ಜಾಗೃತಿ ಮೂಡಿಸಬೇಕಾಗಿದೆ: ಗಣೇಶ ಹೊರಟ್ನಾಳ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಗನಾಳ ಗ್ರಾಮದಲ್ಲಿ ದಲಿತ ವ್ಯಕ್ತಿಯೋರ್ವನನ್ನು ಕಟಿಂಗ್ ಮಾಡಲು ನಿರಾಕರಣೆ ಮಾಡಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕತ್ತರಿಯಿಂದಲೇ ಇರಿದು ಕೊಲೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ ಗ್ರಾಮದ ದುರಗಮ್ಮನ ಗುಡಿಯಲ್ಲಿ ಶಾಂತಿಸಭೆ ನಡೆಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಗ್ರಾಮದ ಜನರಲ್ಲಿ ಧೈರ್ಯತುಂಬುವ ಕೆಲಸ ಮಾಡಿದರು.

ಆಗಿರುವ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ, ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಕುರಿತು ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ಮುಖಂಡ ಗಣೇಶ ಹೊರಟ್ನಾಳ ಮಾತನಾಡಿ, ಘಟನೆ ದುರದೃಷ್ಟಕರ. ಅಂಬೇಡ್ಕರ್ ಅವರು ಸಂವಿಧಾನವನ್ನೇ ನೀಡಿದ್ದರೂ ಈ ತಾರತಮ್ಯ, ಅಸ್ಪೃಶ್ಯತೆ ಇನ್ನು ಜೀವಂತವಾಗಿಯೇ ಇರುವುದು ನೋವಿನ ಸಂಗತಿ. ಗ್ರಾಮೀಣ ಭಾಗದಲ್ಲಿ ಹೋಟೆಲ್ ಮತ್ತು ಕ್ಷೌರದಂಗಡಿಯಲ್ಲಿ ಪದೇ ಪದೇ ದಲಿತರ ಮೇಲೆ ಅಮಾನವೀಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಸಂಗನಾಳ ಗ್ರಾಮದಲ್ಲಿ ಕೊಲೆಯೇ ನಡೆದಿರುವುದು ಅತ್ಯಂತ ಅಮಾನವೀಯವಾಗಿದೆ. ಇನ್ನಾದರೂ ಜಿಲ್ಲಾದ್ಯಂತ ಶಾಂತಿಸಭೆ ನಡೆಸಬೇಕು ಮತ್ತು ಕಾನೂನು ಅರಿವು ಮೂಡಿಸಿ, ದಲಿತರಲ್ಲಿ ಧೈರ್ಯ ತುಂಬಬೇಕಾಗಿದೆ. ಅವರಿಗೆ ಆಗುವ ಅನ್ಯಾಯ ಸರಿಪಡಿಸಬೇಕಾಗಿದೆ ಎಂದರು. ಈ ಘಟನೆ ಇನ್ನೆಂದು ನಡೆಯಬಾರದು. ಇದಕ್ಕಾಗಿ ಹಳ್ಳಿ ಹಳ್ಳಿಯಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.

ಮುಖಂಡ ಸಿದ್ದು ಮಣ್ಣಿನವರ ಮಾತನಾಡಿ, ಇದು ಅತ್ಯಂತ ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು ತಳವಾರ ಮಾತನಾಡಿ, ಘಟನೆಯ ಕುರಿತು ನಮಗೂ ತುಂಬಾ ಬೇಸರವಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗುವುದು ಮತ್ತು ಇಲಾಖೆಯಿಂದ ದೊರೆಯಬೇಕಾದ ಸೌಕರ್ಯ ಮತ್ತು ಸೌಲಭ್ಯ ನೀಡಲಾಗುವುದು. ಈ ರೀತಿಯ ಅನ್ಯಾಯಗಳು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಇಲಾಖೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಸಿಪಿಐ ಮೌನೇಶ್ವರ ಪಾಟೀಲ್ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಇಲಾಖೆಗೆ ಕೇವಲ ಮಾಹಿತಿ ನೀಡಿದರೆ ನಾವು ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ ಎಂದರು.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾರುತಿ ಗೌರವಾಳ, ಸಂಗಪ್ಪ ಜೋಗಣ್ಣವರ, ಪ್ರಕಾಶ ಹಿರೇಮನಿ, ಸದಸ್ಯ ದುರಗಪ್ಪ ಮೊದಲಾದವರು ಇದ್ದರು.