ದೌರ್ಜನ್ಯಪೀಡಿತ ಗ್ರಾಮಕ್ಕೆ ಡಿಸಿ, ಎಸ್ಪಿ ಭೇಟಿದ ಜಿಲ್ಲಾಧಿಕಾರಿ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದರು.

ಹುಬ್ಬಳ್ಳಿ: ದಲಿತ ಕುಟುಂಬದ ದೌರ್ಜನ್ಯ ಮತ್ತು ಗರ್ಭಿಣಿ ಹತ್ಯೆ ಅಮಾನವೀಯ ಕೃತ್ಯದಿಂದ ರಾಜ್ಯದ ಗಮನ ಸೆಳೆದಿದ್ದ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ಜಿಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮದ ಸರ್ವ ಜನಾಂಗದ ಶಾಂತಿ ಮತ್ತು ಸೌಹಾರ್ದ ಸಭೆ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ಭಾಗವಹಿಸಿದ್ದ ಇನಾಂವೀರಾಪುರ ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರು, ಇದೊಂದು ಆಕಸ್ಮಿಕ ಘಟನೆ. ನಾವು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬ, ಜಂಗಮ ಸೇರಿದಂತೆ ಎಲ್ಲ ವೀರಶೈವ ಲಿಂಗಾಯತ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವದಿಂದ ಒಗ್ಗಟ್ಟಾಗಿ ಬಾಳುತ್ತಿದ್ದೇವೆ. ಮುಂದೆಯೂ ಅದೇ ರೀತಿ ಇರುತ್ತೇವೆ. ದೊಡ್ಡಮನಿ ಕುಟುಂಬದವರಿಗೆ ಯಾವುದೇ ತಾರತಮ್ಯ ಮಾಡದೇ ಮೊದಲಿನಂತೆ ಪರಸ್ಪರರು ಇರುತ್ತೇವೆ. ಇದು ಒಂದು ಕುಟುಂಬದ ಸಮಸ್ಯೆ. ಊರಿನ ಸಮಸ್ಯೆಯಲ್ಲ. ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಕ್ರಮವಾಗಲಿ. ಇದನ್ನು ಇಲ್ಲಿಗೆ ಮರೆತು ಎಲ್ಲರೂ ಒಂದಾಗಿ ಗ್ರಾಮದಲ್ಲಿ ವಾಸಿಸುತ್ತೇವೆ ಎಂದು ಜಿಲ್ಲಾಧಿಕಾರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರು, ಆರೋಪಿಗಳಿಗೆ ಒಂದು ವರ್ಷದೊಳಗಾಗಿ ಕಠಿಣ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಕೊಲೆ ಮತ್ತು ದೌರ್ಜನ್ಯ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು, ಆರ್ಥಿಕ ಸಹಾಯ ಹಾಗೂ ಜೀವನೋಪಾಯದ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಿ, ಕ್ರಮವಹಿಸಲಿದೆ. ಪ್ರಕರಣದ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಗ್ರಾಮಸ್ಥರ, ಮುಖಂಡರ, ವಿವಿಧ ಸಮುದಾಯ ಪ್ರತಿನಿಧಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಗೆ ಪರಿಶಿಷ್ಟ ಜಾತಿಯ ಜನಾಂಗದ ಪ್ರಮುಖ ಮುಖಂಡರನ್ನು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮತ್ತು ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ ಯಾವುದೇ ರೀತಿಯ ಭಯ ಅಥವಾ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಘಟನೆಯ ಆಘಾತದಿಂದ ಹೊರಬರಲಾಗದ ಸಂತ್ರಸ್ತ ಕುಟುಂಬ ಮತ್ತು ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ಮೂಡಿಸಲು ನಾವೆಲ್ಲರೂ ಮುಂದಾಗಬೇಕಿದೆ. ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ತಕ್ಷಣ ಸ್ಪಂದಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಮನೆ ವ್ಯವಸ್ಥೆ ಮಾಡಿಕೊಡುವುದು, ಕುಟುಂಬದ ಜೀವನೋಪಾಯಕ್ಕಾಗಿ ಸರ್ಕಾರಿ ಕೆಲಸ ಅಥವಾ ಸೂಕ್ತ ಉದ್ಯೋಗ ನೀಡುವ ಬಗ್ಗೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಗ್ರಾಮದಲ್ಲಿ ಶಾಂತಿ ಕಾಪಾಡಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಹಂತ-ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ಒಂದೊಂದೇ ಹೆಜ್ಜೆಯಲ್ಲಿ ನೆರವು ನೀಡಲಿದೆ. ಇದರಿಂದ ಅವರು ಮತ್ತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬದವರು ಮತ್ತು ಗ್ರಾಮದ ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಮತ್ತು ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಲು ಗ್ರಾಮಸ್ಥರ ಬೆಂಬಲ ಅತ್ಯಗತ್ಯ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹಲ್ಲೆಗೊಳಗಾದ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ಮತ್ತು ರಕ್ಷಣೆ ನೀಡಲಿದೆ. ಕುಟುಂಬ ಆಘಾತಕ್ಕೆ ಒಳಗಾಗಿದೆ. ಈ ದುರಂತದ ನಂತರ ಅವರು ಮತ್ತೆ ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯವಿದೆ. ಈ ಕಷ್ಟದ ಸಮಯದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಅವರ ಬೆನ್ನಿಗೆ ನಿಲ್ಲಲಿದೆ ಎಂದು ಹೇಳಿದರು.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮುರಗೇಶ ಚನ್ನಣ್ಣವರ ಮಾತನಾಡಿದರು. ಡಾ. ಪ್ರಹ್ಲಾದ್‌ ಗೆಜ್ಜಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ ಖಾನಾಪುರ, ಪ್ರೇಮನಾಥ್ ಚಿಕ್ಕತುಂಬಳ, ಪರಮೇಶ್ ಕಾಳೆ, ಚಂದ್ರಶೇಖರ್ ಬಿ. ಯಾದಗೇರ, ಶ್ರೀಧರ್ ಕಂದಗಲ್ಲ, ಕೆಂಚಪ್ಪ ಮಲ್ಲಮ್ಮನವರ ಹಾಗೂ ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ, ಗುರುಸಿದ್ದಯ್ಯ ಹಿರೇಮಠ, ಲಲಿತಾ ಮಡ್ಲಿ, ಬಸವರಾಜ ವಾಲೀಕಾರ, ರೇಣುಕಾ ಹೂಯಿಲಗೋಳ, ಗ್ರಾಪಂ ಸದಸ್ಯ ಶಿವಾನಂದ ಮಣಕವಾಡ, ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ವಾಲೀಕಾರ, ಗ್ರಾಪಂ ಸದಸ್ಯ ಶಿವಾನಂದ ಮೇಕಾರ, ರಮೇಶ ಮಾದರ, ಯಲ್ಲಪ್ಪ ವಾಲಿಕಾರ, ಬಸವರಾಜ್ ವಾಲಿಕಾರ, ರಮೇಶ್ ಮಾದರ ಮಾತನಾಡಿದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಪಿ., ಬೆಳಗಲಿ ಗ್ರಾಪಂ ಅಧ್ಯಕ್ಷ ಬಸವ್ವ ಹೂಲಗೇರಿ ಇದ್ದರು. ದೊಡ್ಡಮನಿ ಕುಟುಂಬಕ್ಕೆ ಸ್ವಾಗತ

ಕಳೆದ ಭಾನುವಾರ ದೌರ್ಜನ್ಯಕ್ಕೆ ಒಳಗಾಗಿ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇನಾಂವೀರಾಪುರ ಗ್ರಾಮದ ವಿವೇಕಾನಂದ ದೊಡ್ಡಮನಿ ಕುಟುಂಬಸ್ಥರನ್ನು ಗ್ರಾಮದ ಶಾಂತಿ ಸಭೆ ನಂತರ, ಸ್ವತಃ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಗ್ರಾಮದ ಪ್ರಮುಖರೊಂದಿಗೆ ಸ್ವಾಗತಿಸಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಗಳ ಪ್ರಮುಖರು, ಗ್ರಾಪಂ ಅಧ್ಯಕ್ಷ, ಸದಸ್ಯರು, ಹಿರಿಯ ಅಧಿಕಾರಿಗಳು, ಇನಾಂ ವೀರಾಪುರ ಗ್ರಾಮದ ಪ್ರಮುಖರು, ಸಾರ್ವಜನಿಕರು ಇದ್ದರು.