ಪಟ್ಟಣದ ದಂಡಿನ ದುರ್ಗಾದೇವಸ್ಥಾನ 25ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಿಗೆ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ರಜತ ಕವಚ ಸಮರ್ಪಿಸಿದರು.

ವಿಜೃಂಭಣೆಯಿಂದ ನಡೆಯುತ್ತಿರುವ ದಂಡಿನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ದಂಡಿನ ದುರ್ಗಾದೇವಸ್ಥಾನ 25ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಿಗೆ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ರಜತ ಕವಚ ಸಮರ್ಪಿಸಿದರು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದಂಡಿನ ದುರ್ಗಾ ದೇವಿ ದೇವಸ್ಥಾನ ಶಕ್ತಿಯುತ ದೇವಸ್ಥಾನವಾಗಿದೆ. ಇದು ತನ್ನದೇ ಆದ ಇತಿಹಾಸ ಹೊಂದಿದೆ. ದೇವಸ್ಥಾನ ಮತ್ತಷ್ಟು ಅಭಿವೃದ್ಧಿಯಾಗಬೇಕು. ಮುಂದಿನ ವರ್ಷ ದೇವಿಗೆ ಎಲ್ಲರ ಸಹಕಾರದಿಂದ ಸುಸಜ್ಜಿತ ಗರ್ಭಗುಡಿ ವ್ಯವಸ್ಥೆ ಆಗಬೇಕು ಎಂದ ಅವರು, ದೇವಸ್ಥಾನ, ಹಿಂದೂಗಳು ಸಶಕ್ತರಾಗಬೇಕು. ಹಿಂದೂಗಳು ಇಂದಿನ ಮತ್ತು ನಾಳೆಯ ಬಗ್ಗೆಯೂ ಚಿಂತನೆ ನಡೆಸಬೇಕು. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಪ್ರಸ್ತಾಪಿಸಿದ ಅವರು ಹಿಂದೂಗಳ ಸದಾ ಜಾಗೃತಿಯಾಗಬೇಕು. ಎಂದಿಗೂ ನಮ್ಮ ಆಚಾರ, ವಿಚಾರ, ಧರ್ಮ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ಜಾತಿ ಸಾಮರಸ್ಯ ರಾಜಕೀಯದಿಂದ ಹಾಳಾಗಿದೆ. ಎಲ್ಲರೂ ಒಟ್ಟಾಗಿ ಇಂತಹ ಪುಣ್ಯ ಕೆಲಸ ಮಾಡಬೇಕು ಎಂದ ಅವರು ಆಸ್ತಿಕ ಸಿದ್ದಾಂತ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಮುಂದಿನ ದಿನಗಳಲ್ಲಿ ದಂಡಿನ ದುರ್ಗಾ ದೇವಸ್ಥಾನ ಮತ್ತಷ್ಟು ವಿಜೃಂಭಿಸಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಸಮಾಜ ಸೇವಕ ರತ್ಕಾಕರ ನಗರರ್ಕರ್, ದಾನಿಗಳಾದ ಮಾದೇವ ನಾಯ್ಕ, ದೇವಸ್ಥಾನದ ಪ್ರಧಾನ ಅರ್ಚಕ ರಾಜೇಶ ಭಟ್ಟ, ಈ ಹಿಂದೆ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ನಾಗೇಶ ಭಟ್ಟ, ಪ್ರಕಾಶ ಭಟ್ಟ, ಗಣಪತಿ ಹೆಗಡೆ, ಸಿ.ಎಂ. ಭಟ್ಟ, ಶ್ರೀಧರ ಭಟ್ಟ, ವಿನೋದ ಭಟ್ಟ, ಮಂಜುನಾಥ ಭಟ್ಟ, ಶೇಷಗಿರಿ ಹೆಬ್ಬಾರ, ಕವಿ ಮಂಜುಸತ ಜಲವಳ್ಳಿ ಮುಂತಾದವರಿದ್ದರು.

ದುರ್ಗಾದಾಸ ನಾಯ್ಕ ಪ್ರಾರ್ಥಿಸಿದರು. ದೇವಸ್ಥಾನದ ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಪವಾಸ್ಕರ ವಂದಿಸಿದರು. ಇದೇ ಸಂದರ್ಭ ಕವಿ ಮಂಜುಸುತ ಜಲವಳ್ಳಿ ಅವರು ದಂಡಿದದುರ್ಗಾ ದೇವಸ್ಥಾನದ ಬಗ್ಗೆ ರಚಿಸಿದ 7 ಭಕ್ತೀಗೀತೆಗಳ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಕವಿ ಮತ್ತು ಪುಸ್ತಕ ಪರಿಚಯ ಮಾಡಿದರು. ಬೆಳಗ್ಗೆ ಪಟ್ಟಣದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಜನವರಿ 9ರ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.