ಸಾರಾಂಶ
ಚೌಡೇಶ್ವರಿ ಅಮ್ಮನ ರಥ ಲೋಕಾರ್ಪಣೆ । ಧಾರ್ಮಿಕ ಸಭೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಧಾರ್ಮಿಕವಾಗಿ ಉತ್ತಮವಾದ ಕೆಲಸ ಮಾಡುವುದರಿಂದ ನಮ್ಮ ಮನಸ್ಸಿಗೂ ನೆಮ್ಮದಿ ಕೊಡುತ್ತದೆ ಮತ್ತು ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೀಸಾವೆಯಲ್ಲಿ ಸೋಮವಾರ ಚೌಡೇಶ್ವರಿ ಅಮ್ಮನವರ ನೂತನ ರಥವನ್ನು ಲೋಕಾರ್ಪಣೆ ಮತ್ತು ನವೀಕರಿಸಿದ ತೇರಿನ ಮನೆಯ ಉದ್ಘಾಟನೆ ಮಾಡಿ ನಂತರ ನಡೆದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ‘ಕೆಟ್ಟ ಕೆಲಸ ಮಾಡುವುದರಿಂದ ನಮ್ಮ ಬದುಕು ಕೆಡುತ್ತದೆ, ಸಮಾಜವು ಕೆಡುತ್ತದೆ ಎಂದು ತಿಳಿದಾಗ, ಆ ಕಾರ್ಯವನ್ನು ಮಾಡಬಾರದು’ ಎಂದು ಕಿವಿಮಾತು ಹೇಳಿದರು.‘ನಮ್ಮ ದೇಶದ ಶಕ್ತಿಯೇ ಧಾರ್ಮಿಕ ಶ್ರದ್ಧೆ, ಆ ಶ್ರದ್ಧೆಯನ್ನು, ಅಂಧಕಾರ ಎಂದು ತಿಳಿಯಬಾರದು. ಜ್ಞಾನದ ಜ್ಯೋತಿ ಎಂದು ಭಾವಿಸಬೇಕು. ಮನಸ್ಸಿಗೆ ಶಕ್ತಿ, ಭಕ್ತಿ, ಆನಂದ, ಉಲ್ಲಾಸವನ್ನು ತಂದು ಕೊಡುವುದೇ ಶುದ್ಧ ಚೈತನ್ಯದ ಕೆಲಸವಾಗಿರುತ್ತದೆ. ದೇವಸ್ಥಾನಕ್ಕೆ ಹೋದಾಗ ಮನುಷ್ಯನಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ದೇಹ ಎಂಬ ರಥದೊಳಗೆ ಬೆಳಕಿನ ಆತ್ಮ ಇರಬೇಕು. ದೇವರು ಐದು ಚಕ್ರಗಳನ್ನು ಮನುಷ್ಯನ ದೇಹದಲ್ಲಿ ಇಟ್ಟಿದ್ದಾನೆ, ಈ ಪಂಚ ಇಂದ್ರಿಯಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ, ಮನಸ್ಸು ಎಂಬ ರಥವು ಸರಿಯಾಗಿ ಚಲಿಸುತ್ತದೆ. ಆತ್ಮ ಶಕ್ತಿಯನ್ನು ಜಾಗೃತವಾಗಿ ಬಳಸಿಕೊಳ್ಳಬೇಕು. ದೇವರಿಗೆ ಶುದ್ಧ ಮನಸ್ಸಿನ ಭಕ್ತಿಯನ್ನು ಸಮರ್ಪಿಸಿದರೆ, ಒಳ್ಳೆಯ ಫಲವನ್ನು ಪಡೆಯಬಹುದು’ ಎಂದು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಯ ಅಭಾವದಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿ, ಕೆರೆ ಕಟ್ಟೆಗಳು ತುಂಬುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.ಸ್ವಾಮೀಜಿಯವರು ಗ್ರಾಮಕ್ಕೆ ಆಗಮಿಸಿದಾಗ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು.ನೂತನ ತೇರು ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಶಿಲ್ಪಿಗಳನ್ನು ಅಭಿನಂದಿಸಲಾಯಿತು. ರಥ ಲೋಕಾರ್ಪಣೆ ಪ್ರಯುಕ್ತ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ವಿವಿಧ ಪೂಜೆಗಳು ಮತ್ತು ಹೋಮಗಳನ್ನು ಹಾಸನ ವೇ.ಬ್ರಹ್ಮಶ್ರೀ ಕೃಷ್ಣಮೂರ್ತಿ ಘನಪಾಟಿ ನೇತೃತ್ವದಲ್ಲಿ ಜರುಗಿದವು. ಚೌಡೇಶ್ವರಿ ಸಮದಾಯ ಭವನದಲ್ಲಿ ಭಕ್ತರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ಪ್ರಧಾನ ಅರಣ್ಯಾಧಿಕಾರಿ ಜಿ.ಎನ್. ಶ್ರೀಕಂಠಯ್ಯ, ರಥ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಆರ್. ಬಾಲಕಷ್ಣ ಮಾತನಾಡಿದರು. ವೇದಿಕೆಯಲ್ಲಿ ತೇರಿನ ಮನೆಯ ನವೀಕರಣ ಮಾಡಿಕಟ್ಟ ದಾನಿಗಳಾದ ಮಂಗಳ ಚಂದ್ರು, ದೇವಸ್ಥಾನದ ಮುಖ್ಯಸ್ಥರಾದ ಫಣೀಶ್, ಅನಂತರಾಮಯ್ಯ, ತೇರಿನ ಶಿಲ್ಪಿ ಶಿವಮೊಗ್ಗದ ಸಂತೋಷ, ಬಿಜೆಪಿ ಮುಖಂಡ ಶಿವನಂಜೇಗೌಡ, ಗ್ರಾಮದ ಮುಖಂಡರಾದ ಎಚ್.ಎನ್. ಮಂಜಪ್ಪ, ಅರಳಿಮರದ ಎಚ್.ಎಸ್. ಕುಮಾರ್, ಹೊಸಮನೆ ಚಂದ್ರು, ರಾಮಕೃಷ್ಣ, ರವಿಕುಮಾರ್, ಸೇರಿ ರಥ ನಿರ್ಮಾಣ ಸಮಿತಿಯವರು, ಗ್ರಾಮದ ಮುಖಂಡರು ಇದ್ದರು.ಚನ್ನರಾಯಪಟ್ಟಣದ ಹಿರೀಸಾವೆಯಲ್ಲಿ ಸೋಮವಾರ ಚೌಡೇಶ್ವರಿ ಅಮ್ಮನವರ ನೂತನ ರಥವನ್ನು ಲೋಕಾರ್ಪಣೆ ಮತ್ತು ನವೀಕರಿಸಿದ ತೇರಿನ ಮನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿದರು. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಇತರರು ಇದ್ದರು.
;Resize=(128,128))
;Resize=(128,128))