ಶರಣತತ್ವ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಶಾಂತಿ, ಸಮೃದ್ಧಿ: ಮಹಾಂತ ಸ್ವಾಮೀಜಿ

| Published : Apr 14 2024, 01:59 AM IST

ಶರಣತತ್ವ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಶಾಂತಿ, ಸಮೃದ್ಧಿ: ಮಹಾಂತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಜಗತ್ತಿನ ಯಾವ ಧರ್ಮ ಪರಂಪರೆಯಲ್ಲಿ ಸಿಗದೇ ಇರುವ ಅಮೂಲ್ಯ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಶರಣಧರ್ಮದಲ್ಲಿದೆ. ಶರಣ ಧರ್ಮ ಪರಂಪರೆ ನೀಡಿರುವ ಮೌಲ್ಯಗಳನ್ನು ಜಗತ್ತು ಅಳವಡಿಸಿಕೊಂಡರೆ ಪ್ರಗತಿಯಾಗಲು ಸಾಧ್ಯ ಎಂದು ಮುದಗಲ್‌ ಕಲ್ಯಾಣ ಆಶ್ರಮ, ಮಹಾಂತೇಶ್ವರಮಠದ ಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಶುಕ್ರವಾರ ಸಂಜೆ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಮನುಷ್ಯನಿಗೆ ಅನೇಕ ದಾಹಗಳಿವೆ. ಶರಣರು ಈ ದಾಹಕ್ಕೆ ಸೋ ಎಂಬ ಶಬ್ದ ಸೇರಿಸಿ ವಿಶಾಲವಾದ ದಾಸೋಹದ ಕಲ್ಪನೆ ನೀಡಿದ್ದಾರೆ. ದಾಸೋಹವೆಂದರೆ ಕೇವಲ ಶ್ರೀಮಠಗಳಿಗೆ ಸೀಮಿತವಲ್ಲ. ಇಡೀ ವಿಶ್ವವನ್ನು ಗಮನದಲ್ಲಿಕೊಂಡು ವಿಶಾಲಾರ್ಥದಲ್ಲಿ ಶರಣರು ದಾಸೋಹದ ಪರಿಕಲ್ಪನೆ ನೀಡಿದ್ದಾರೆ. ಈ ತತ್ವವನ್ನು ಅಳವಡಿಸಿಕೊಂಡರೆ ಇಡೀ ಜಗತ್ತು ಸಮೃದ್ಧಿಯಾಗುತ್ತದೆ ಎಂದು ಹೇಳಿದರು.

ಸುವರ್ಣ ಪ್ರಶಸ್ತಿ ಸ್ವೀಕರಿಸಿದ ಚಿಂತಕ, ವಿಮರ್ಶಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ೧೨ ನೇ ಶತಮಾನದಲ್ಲಿ ನಡೆದ ವಚನಕ್ರಾಂತಿಯಂತಹ ಕ್ರಾಂತಿ ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ. ವಚನಗಳು ತಾತ್ವಕ ಚಿಂತನೆ ಒಳಗೊಂಡಿದೆ. ವೈದಿಕ ಧರ್ಮವನ್ನು ಶರಣರು ನೇರವಾಗಿ ವಿರೋಧಿಸಿದರು. ಸನಾತನ ಎಂಬುವುದು ಶಾಶ್ವತ. ಇದು ಜಡವಾಗಿ ಪರಿವರ್ತನೆಯಾಗದೆ ಇರುವುದನ್ನು ನೋಡುತ್ತೇವೆ. ಪುರಾತನರ ಧರ್ಮ ಪರಿವರ್ತನೆಶೀಲತೆ ಹೊಂದಿದೆ. ಮೌಢ್ಯತೆ ವಿರೋಧಿಸಿ ವೈಜ್ಞಾನಿಕ ಪ್ರಜ್ಞೆ ಬೆಳೆಸುತ್ತದೆ. ಶರಣರು ಆಡಿದ ಪ್ರತಿಯೊಂದು ಮಾತು ಜ್ಯೋತಿರ್ಲಿಂಗವಾಗಿವೆ. ಶರಣರು ನೀಡಿದ ಸಂದೇಶಗಳು ಸಮಾಜಕ್ಕೆ ದಾರಿಯಾಗುವ ಜೊತೆಗೆ ವ್ಯಕ್ತಿಗೆ ಹಿತಕಾರಿಯಾಗಿವುದು ಸತ್ಯ ಎಂದು ಅಭಿಪ್ರಾಯಪಟ್ಟರು.

ಇಂಗಳೇಶ್ವರದ ಡಾ.ಸಿದ್ದಲಿಂಗ ಸ್ವಾಮೀಜಿ, ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸುವರ್ಣ ಪ್ರಶಸ್ತಿ ಸ್ವೀಕರಿಸಿದ ಶಂಕರಯ್ಯ ಘಂಟಿ, ಸಾಹಿತಿ ಡಾ.ಸಿ.ಸಿ.ಲಿಂಗಣ್ಣ ಮಾತನಾಡಿದರು.

ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗನಗೌಡ ಬಿಕಾದಾರ, ರವಿ ಪಟ್ಟಣಶೆಟ್ಟಿ, ಅಮರಪ್ಪಗೌಡ ಪಾಟೀಲ, ಬಸವರಾಜ ಬಿರಾದಾರ ದಂಪತಿಯನ್ನು ಆದರ್ಶ ದಂಪತಿಗಳೆಂದು ಗೌರವಿಸಲಾಯಿತು. ಶ್ರೀಗಳ ಜನ್ಮಸುವರ್ಣ ಮಹೋತ್ಸವ ನಿಮಿತ್ತ ವಿದ್ಯಾರ್ಥಿದೇವೋಭವ ಅಂಗವಾಗಿ ಬಡವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಲಾಯಿತು. ಸಾಕ್ಷಿ ಹಿರೇಮಠ ಪ್ರಾರ್ಥಿಸಿದರು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಗಿರಿಜಾ ಪಾಟೀಲ, ಪುಷ್ಪಾ ಗುಳೇದ, ಶರಣಬಸು ಹಳಮನಿ ನಿರೂಪಿಸಿದರು. ಅಂತಾರಾಷ್ಟ್ರೀಯ ಕಲಾವಿದರಾದ ದೀಶಾ ಬಿಸೆ, ದಿವ್ಯಾ ಬಿಸೆ ಹಾಗೂ ಸಂಗಡಿಗರಿಂದ ವಚನ ನೃತ್ಯ, ಹಾಸ್ಯ ನಟ ಪ್ರವೀಣ ಗಸ್ತಿ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು.ಕನ್ನಡ ನೆಲದಲ್ಲಿ ಹುಟ್ಟಿದ ಕನ್ನಡದ ವಚನಧರ್ಮ ಲಿಂಗಾಯತ ಧರ್ಮ. ಇದು ಕಾಯಕ ಜೀವಿಗಳು ಸಂಘಟಿತರಾಗಿ ಕಟ್ಟಿದ ಕನ್ನಡ ಧರ್ಮ. ಇದರ ನೇತೃತ್ವ ವಹಿಸಿಕೊಂಡಿದ್ದ ಮಹಾ ಮಾನವತಾವಾದಿ ಬಸವಣ್ಣನವರು. ಇವರು ಕನ್ನಡ ನೆಲದ ಕನ್ನಡ ಭಾಷೆಯ ಸಾಂಸ್ಕೃತಿಕ ವಕ್ತಾರರಾಗಿದ್ದಾರೆ. ಕಾಯಕದ ಬೆವರಿನ ಬೆಲೆಯನ್ನು ಸತ್ಯಶುದ್ಧ ಘನತೆಯಲ್ಲಿ ಎತ್ತಿಹಿಡಿದಂತೆ ಕಾಯಕವೇ ಕೈಲಾಸವೆಂದು ಕರೆದದ್ದು ವಚನಧರ್ಮ.

- ಪ್ರೊ.ಎಸ್.ಜಿ. ಸಿದ್ದರಾಮಯ್ಯ, ವಿಮರ್ಶಕ