ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರಿನ ಕೆ.ಆರ್. ಬಡಾವಣೆಯ ಶ್ರೀ ರಾಮ ಮಂದಿರಕ್ಕೆ ಸಂಬಂಧಿಸಿದ ಸಂಪೂರ್ಣ ಜಾಗದ ಅಧಿಕೃತ ಸರ್ವೇ, ಹದ್ದುಬಸ್ತು ಹಾಗೂ ಅಳತೆ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಶಾಸಕ ಜ್ಯೋತಿ ಗಣೇಶ್ ಆಗ್ರಹಿಸಿದರು. ಈ ಸಂಬಂಧ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರಿಗೆ ಮನವಿ ಪತ್ರ ನೀಡಿರುವ ಅವರು ಮುಜರಾಯಿ ಇಲಾಖೆಯ ದಾಖಲೆಗಳು ಹಾಗೂ ರಾಜ್ಯ ಪತ್ರದಲ್ಲಿ ಉಲ್ಲೇಖಿತ ಜಾಗವನ್ನು ದೇವಾಲಯದ ಆಸ್ತಿಯಾಗಿ ಸಂರಕ್ಷಿಸುವ ಕ್ರಮ ವಹಿಸಬೇಕು. ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹಾಸ್ಟೆಲ್ ಸೇರಿದಂತೆ ಯಾವುದೇ ಹೊಸ ನಿರ್ಮಾಣ ಕಾರ್ಯಗಳ ಕುರಿತು ಪ್ರಸ್ತಾಪವಿದ್ದರೆ, ಅದನ್ನು ತಕ್ಷಣವೇ ಕೈಬಿಡಬೇಕು. ದೇವಾಲಯಕ್ಕೆ ಸಂಬಂಧಿಸಿದ ಜಾಗವನ್ನು ಹಿಂದೂ ದೇವತಾ ಕಾರ್ಯಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿ ಉಪಯೋಗವಾಗುವಂತೆ ಕ್ರಮ ವಹಿಸಬೇಕು ಎಂದಿದ್ದಾರೆ.

ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಷಯ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ತುಮಕೂರು ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಸಾಧ್ಯತೆಯಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದದ್ದಾಗಿರುವುದರಿಂದ ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ಹನುಮಂತರಾಜು, ಬಿಜೆಪಿ ನಗರಾಧ್ಯಕ್ಷ ಧನುಷ್.ಟಿ.ಕೆ ಇದ್ದರು.