ರಾಮರಾಜ್ಯದಿಂದ ನೆಮ್ಮದಿಯ ಬದುಕು ಸಾಧ್ಯ: ಕಾಡಸಿದ್ದೇಶ್ವರ ಶ್ರೀ

| Published : Feb 01 2024, 02:09 AM IST

ಸಾರಾಂಶ

ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅವರ 72ನೇ ಜನ್ಮ ವರ್ಧಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತಿಪಟೂರು

ಅಸಂಖ್ಯಾತ ಹಿಂದುಗಳ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ಮೂಲಕ ನನಸಾಗಿದ್ದು, ಅದರಂತೆ ನಮ್ಮ ದೇಶ ರಾಮ ರಾಜ್ಯವಾಗಿ ಎಲ್ಲರೂ ಸಹೋದರತ್ವ, ಸಮಾನತೆ, ಬ್ರಾತೃತ್ವದೊಂದಿಗೆ ಜೀವಿಸಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು ಎಂದು ತಾಲೂಕಿನ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶಿಸಿದರು.

ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅವರ 72ನೇ ಜನ್ಮ ವರ್ಧಂತಿ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಕಲಿಸುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡಬೇಕು. ದೇಶ ವೃದ್ಧಾಶ್ರಮ ಮುಕ್ತವಾಗಿ ವಸುದೇವ ಕುಟುಂಬವಾಗಬೇಕು. ಭಕ್ತರು ಗುರುಗಳು ಶತಾಯುಷಿಗಳಾಗಲೆಂದು ಬಯಸಿದರೆ ಗುರುಗಳು ಸಹ ಭಕ್ತರು ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಆಶಿಸುತ್ತಾರೆ.

ಈ ಕಾರ್ಯಕ್ರಮವನ್ನು ಭಕ್ತರೇ ಆಯೋಜಿಸಿದ್ದು, ನನಗೆ ಭಕ್ತರ ಕಷ್ಟ, ಕಾರ್ಪಣ್ಯಗಳು ದೂರವಾಗಲಿ, ಭಕ್ತರ ಸುಖವೇ ಗುರುವಿನ ಸಂತೋಷ. ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರು, ಸುಖವಾಗಿರಲಿ ರಾಜಕಾರಣಿಗಳಲ್ಲಿ ದೇಶನಿಷ್ಠ ಪ್ರಜಾ ಪರಿಪಾಲನೆ ಇರಲಿ, ಯುವಕರು ಸದೃಢ ದೇಶ ನಿರ್ಮಾಣವಾಗಲು ಪಣತೊಡಬೇಕು, ದೇಶ ಅಭಿಮಾನ ಭಾಷಾಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ. ಸೋಮಣ್ಣ, ಶಾಸಕ ಕೆ. ಷಡಕ್ಷರಿ, ಕಾಂಗ್ರೆಸ್ ಮುಖಂಡ ಲೋಕೇಶ್ವರ, ಬಿಜೆಪಿ ವಕ್ತಾರ ಚಂದ್ರಶೇಖರ್‌, ನಿಖಿಲ್ ರಾಜಣ್ಣ, ಶ್ರೀಮಠದ ಕಾರ್ಯಕಾರಿ ಮಂಡಳಿ, ಸಿಬ್ಬಂದಿ ವರ್ಗದವರು ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.