ಧರ್ಮದ ದಾರಿಯಿಂದ ಮಾತ್ರ ನೆಮ್ಮದಿಯ ಜೀವನ: ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು

| Published : May 02 2024, 12:23 AM IST

ಧರ್ಮದ ದಾರಿಯಿಂದ ಮಾತ್ರ ನೆಮ್ಮದಿಯ ಜೀವನ: ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆಯ ತಾಲೂಕಿನ ಬಾಣಾವರದಲ್ಲಿ ಶ್ರೀ ಬಾಣೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.

ಧರ್ಮ ಜಾಗೃತಿ । ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನುಷ್ಯ ಜೀವನದಲ್ಲಿ ಸುಖ ಶಾಂತಿ ಬಯಸುವುದು ಸಹಜ. ಧರ್ಮದ ದಾರಿಯಲ್ಲಿ ನಡೆದಾಗ ಮನುಷ್ಯ ನೆಮ್ಮದಿಯ ಜೀವನ ಪಡೆಯಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು

ತಾಲೂಕಿನ ಬಾಣಾವರದಲ್ಲಿ ಶ್ರೀ ಬಾಣೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ‘ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿದ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದೆ ಹೋದರೆ ಮಾನವ ಜೀವನ ವ್ಯರ್ಥವಾಗಿ ಹೋಗುತ್ತದೆ. ಸುಖವನ್ನು ಬಯಸುವ ಮನುಷ್ಯ ಧರ್ಮ ಪರಿಪಾಲನೆ ಮಾಡಬೇಕಾಗುತ್ತದೆ. ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ, ದಶಧರ್ಮ ಸೂತ್ರಗಳನ್ನು ಬೋಧಿಸಿ ಸಕಲರ ಬಾಳಿಗೂ ಬೆಳಕನ್ನು ತೋರಿದ್ದಾರೆ. ಇದೇ ದಾರಿಯಲ್ಲಿ ೧೨ನೇ ಶತಮಾನದ ಶರಣರು ನಡೆದು ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸಿದರು. ಪ್ರಾಚೀನ ಕಾಲದಲ್ಲಿ ಜಗದ್ಗುರು ರೇಣುಕಾಚಾರ್ಯ ಬೋಧಿಸಿದ ತತ್ವ ಸಿದ್ಧಾಂತಗಳನ್ನು ಶರಣರು ಅಚ್ಚ ಕನ್ನಡದಲ್ಲಿ ಜನತೆಗೆ ಮುಟ್ಟಿಸುವ ಕಾರ್ಯವನ್ನು ಮಾಡಿದರು’ ಎಂದು ಹೇಳಿದರು.

‘ಜಗದ ಕತ್ತಲೆ ಕಳೆದು ಸೂರ್ಯ ಬರಬೇಕು. ಬದುಕಿನ ಕತ್ತಲೆ ದೂರ ಮಾಡಲು ಗುರು ಬೇಕೇ ಬೇಕು. ಬಾಣಾವರ ಪಟ್ಟಣದ ಇತಿಹಾಸ ಪ್ರಸಿದ್ಧವಾದ ಬಾಣೇಶ್ವರ ದೇವಸ್ಥಾನವನ್ನು ಭವ್ಯವಾಗಿ ಶಿಲಾಮಂಟಪದಿಂದ ನಿರ್ಮಿಸಿ ಇಂದು ಪುನರ್ ಪ್ರತಿಷ್ಠಾಪನೆ ಮಾಡಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಹೂಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ, ದೊಡ್ಡಗುಣ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ, ಕೆ.ಬಿದರೆ ದೊಡ್ಡಮಠದ ಪ್ರಭು ಕುಮಾರ ಶಿವಾಚಾರ್ಯ ಪಾಲ್ಗೊಂಡು ಉಪದೇಶಾಮೃತ ನೀಡಿದರು.

ಸಮಾರಂಭಕ್ಕೂ ಮುನ್ನ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗೆ ಅಲಂಕೃತ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಜಗದ್ಗುರುಗಳನ್ನು ಬರಮಾಡಿಕೊಂಡರು. ಉತ್ಸವದಲ್ಲಿ ಮಹಿಳೆಯರು ಆರತಿ ಹಿಡಿದ ಬೆಳಗಿದರು. ಅನೇಕ ವಾದ್ಯ ವೈಭವಗಳೊಂದಿಗೆ ಭವ್ಯ ಮೆರವಣಿಗೆ ಸಾಗಿತು. ಸಮಾರಂಭದ ನಂತರ ಬಂದ ಎಲ್ಲ ಭಕ್ತರಿಗೆ ಅನ್ನದಾಸೋಹ ನಡೆಯಿತು.

ಅರಸೀಕೆರೆಯ ಬಾಣಾವರದಲ್ಲಿ ಶ್ರೀ ಬಾಣೇಶ್ವರ ನೂತನ ದೇವಸ್ಥಾನದ ಉದ್ಘಾಟನೆ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.