ಶ್ರೀಮಾರಿಕಾಂಬಾ ದೇವಿಯ ಉತ್ಸವಮೂತಿಯನ್ನು ಬುಧವಾರ ರಾತ್ರಿ ವನಕ್ಕೆ ಬಿಟ್ಟುಬರುವ ಶಾಸ್ತ್ರದೊಂದಿಗೆ 9 ದಿನಗಳ ಕಾಲ ಅದ್ದೂರಿಯಾಗಿ ನಡೆದ ಮಾರಿಜಾತ್ರೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಸಾಗರ
ಶ್ರೀಮಾರಿಕಾಂಬಾ ದೇವಿಯ ಉತ್ಸವಮೂತಿಯನ್ನು ಬುಧವಾರ ರಾತ್ರಿ ವನಕ್ಕೆ ಬಿಟ್ಟುಬರುವ ಶಾಸ್ತ್ರದೊಂದಿಗೆ 9 ದಿನಗಳ ಕಾಲ ಅದ್ದೂರಿಯಾಗಿ ನಡೆದ ಮಾರಿಜಾತ್ರೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಸಂಪನ್ನಗೊಂಡಿತು.ಬುಧವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆಯ ನಂತರ ಭವ್ಯ ಉತ್ಸವಮೂರ್ತಿಯನ್ನು ಅಲಂಕೃತ ರಥಕ್ಕೆ ತಂದು ಕೂರಿಸಲಾಯಿತು. ನಂತರ ಉತ್ಸವಮೂರ್ತಿಯ ಅದ್ದೂರಿ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು, ಝಾಂಜ್ ಮುಂತಾದ ಕಲಾತಂಡಗಳು ಭಾಗವಹಿಸಿ ಮೆರಗು ತಂದುಕೊಟ್ಟಿದ್ದವು. ಅಪಾರ ಜನಸ್ತೋಮದೊಂದಿಗೆ ಮೆರವಣಿಗೆ ನಡೆಯಿತು. ಭಕ್ತರು ಹರಕೆಯ ಕೋಳಿಗಳನ್ನು ಅಮ್ಮನ ಮೂರ್ತಿಗೆ ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು.
ಜಾತ್ರೆಯಲ್ಲಿ ಈ ಬಾರಿ ಲಕ್ಷಾಂತರ ಭಕ್ತರು ಭಾಗವಹಿಸಿ ಅಮ್ಮನ ದರ್ಶನ ಪಡೆದು ಪುನೀತರಾದರು. ಪ್ರತಿದಿನವೂ ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಅಮ್ಮನ ದರ್ಶನ ಪಡೆದರು. ಸೂಕ್ತ ಪೊಲೀಸ್ ಬಂದೋಬಸ್ತಿನಿಂದ ಎಲ್ಲಿಯೂ ನೂಕುನುಗ್ಗಲು ಉಂಟಾಗಲಿಲ್ಲ. ಕೆಲವು ದಿನ ಭಕ್ತರು ತಡರಾತ್ರಿಯೇ ಮುಂಚಿತವಾಗಿ ಸರತಿ ಸಾಲಿನಲ್ಲಿ ಕಾದು ಬೆಳ್ಳಂಬೆಳಗ್ಗೆ ಅಮ್ಮನ ದರ್ಶನ ಪಡೆದದ್ದು ವಿಶೇಷವಾಗಿತ್ತು.ಇಡೀ ಜಾತ್ರೆ ಶ್ರೀಮಾರಿಕಾಂಬಾದೇವಿ ನ್ಯಾಸ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಯಾವುದೆ ಕುಂದುಕೊರತೆ, ಸಮಸ್ಯೆಯಾಗದಂತೆ ನಡೆಯಿತು. ಶಾಸಕರು ಜಾತ್ರೆಯ ಮೊದಲ ದಿನ ಅಮ್ಮನವರ ಎದುರು ನಿಂತು ಜನದಟ್ಟಣೆ ಆಗದಂತೆ ನೋಡಿಕೊಳ್ಳುವ ಜೊತೆಗೆ ಬುಧವಾರ ರಾತ್ರಿ ಅಮ್ಮನವರನ್ನು ವನಕ್ಕೆ ಬಿಡುವ ಸಂದರ್ಭದಲ್ಲಿ ಅಮ್ಮನವರ ಪಕ್ಕ ನಿಂತು ಮೈಕ್ ಹಿಡಿದು ಜನರು ಸರಾಗವಾಗಿ ಚಲಿಸುವಂತೆ ಸೂಚನೆ ನೀಡಿ ಜನರ ಗಮನ ಸೆಳೆದರು. ಜಾತ್ರೆಯ ಯಶಸ್ಸಿಗೆ ಪ್ರತಿ ಉಪಸಮಿತಿಗೆ ಸರ್ಕಾರಿ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳ ಉಸ್ತುವಾರಿಯಲ್ಲಿ ಎಲ್ಲ ಉಪಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜಾತ್ರೆಯ ಯಶಸ್ಸಿಗೆ ಕಾರಣರಾದರು.
ಊಟದ ಸಂತೃಪ್ತಿ:ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನವೂ ಸಾವಿರಾರು ಸಂಖ್ಯೆಯ ಭಕ್ತರು ಊಟ ಮಾಡಿ ಸಂತೃಪ್ತರಾದರು. ನಿತ್ಯವೂ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನ ಜಿಲೇಬಿ, ಹೋಳಿಗೆ, ಪಾಯಸ, ರೊಟ್ಟಿ ಮುಂತಾದ ರುಚಿಕಟ್ಟಾದ ಭೋಜನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪೌರಕಾರ್ಮಿಕರಿಗೆ ಅಭಿನಂದನೆ:ಇಡೀ ಜಾತ್ರೆಯಲ್ಲಿ ಪೌರಕಾರ್ಮಿಕರು ಮಾಡಿದ ಸ್ವಚ್ಛತೆಯ ಕಾರ್ಯಕ್ಕೆ ಹ್ಯಾಟ್ಸಪ್ ಎನ್ನಲೇಬೇಕು. ತಡರಾತ್ರಿಯ ನಂತರ ಜಾತ್ರೆಪೇಟೆ ಮುಗಿದ ನಂತರ ಬೆಳಗಿನಜಾವ ೩-೪ಗಂಟೆಗೆ ಕೆಲಸಕ್ಕಿಳುತ್ತಿದ್ದ ಪೌರಕಾರ್ಮಿಕರು ಬೆಳಗ್ಗೆ ೬ಗಂಟೆಯೊಳಗಾಗಿ ಇಡೀ ಜಾತ್ರೆಪೇಟೆ, ದೇವಸ್ಥಾನದ ಸುತ್ತಮುತ್ತ, ಅಮ್ಯಾಸ್ಮೆಂಟ್ ಪಾರ್ಕನ್ನು ಸ್ವಚ್ಛಗೊಳಿಸುತ್ತಿದ್ದರು. ನಗರಸಭೆಯ ಹಾಲಿ ಪೌರಕಾರ್ಮಿಕರಲ್ಲದೆ ಹೆಚ್ಚುವರಿಯಾಗಿ ಬೇರೆಡೆಯಿಂದ ಪೌರಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು. ಪ್ರತನಿತ್ಯ ೫೦ಟನ್ನಷ್ಟು ಕಸವನ್ನು ವಿಲೇವಾರಿ ಮಾಡಿ ಊರನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟಿದ್ದರು.
ಸೂಕ್ತ ಪೊಲೀಸ್ ಬಂದೋಬಸ್ತ್:ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಯಾವುದೇ ಗೊಂದಲ, ಗಲಾಟೆಯಾಗದ ರೀತಿಯಲ್ಲಿ ಪೊಲೀಸರ ಬಂದೋಬಸ್ತ್ ವ್ಯವಸ್ಥೆ ಇಡೀ ಜಾತ್ರೆಯ ಯಶಸ್ಸಿಗೆ ಕಾರಣವಾಯಿತು. ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರೂ ಎಲ್ಲಿಯೂ ಗಲಾಟೆ, ಕಿರಿಕಿರಿಯಾಗದಂತೆ ಪೊಲೀಸರು ರಕ್ಷಣೆ ನೀಡಿದ್ದರು. ಪೊಲೀಸರು ಮೇಲಧಿಕಾರಿಗಳು ನೀಡಿದ್ದ ಸೂಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಜಾತ್ರೆ ಯಶಸ್ವಿಯಾಯಿತು.
ಒಟ್ಟಾರೆ ಶಾಸಕರು, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ.ಬೆನಕಪ್ರಸಾದ್, ತಾಲೂಕು ಮಟ್ಟದ ಅಧಿಕಾರಿಗಳು ಜಾತ್ರೆ ಯಶಸ್ಸಿನಲ್ಲಿ ಪ್ರಮುಖಪಾತ್ರ ವಹಿಸಿದರು. ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ ಕೆ.ಎನ್., ಉಪಾಧ್ಯಕ್ಷ ಸುಂದರ ಸಿಂಗ್, ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ ಹಾಗೂ ಎಲ್ಲಾ ಸಮಿತಿ ಸಂಚಾಲಕರು ಜಾತ್ರೆ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.