ನಾಳೆ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ: ಕೊಡಗನ ಹರ್ಷ

| Published : Jan 19 2025, 02:15 AM IST

ನಾಳೆ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ: ಕೊಡಗನ ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗೌಡ ಸಂಘಟನೆಗಳಿಂದ ಸೋಮವಾರ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಗೌಡ ಯುವಕ‌ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.

ಕುಶಾಲನಗರ: ಶ್ರೀ ಕ್ಷೇತ್ರ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗೌಡ ಸಂಘಟನೆಗಳಿಂದ ಸೋಮವಾರ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಗೌಡ ಯುವಕ‌ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಈಗಾಗಲೇ ಹಲವು ಕಡೆ ದೂರು ದಾಖಲಿಸಲಾಗಿದೆ. ಆದರೆ ಇನ್ನು ಕೂಡ ಕೆಲವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮುಂದಿನ ದಿನಗಳಲ್ಲಿ ಗೌಡ ಜನಾಂಗದ ಬಗ್ಗೆ ಅವಹೇಳನ ಮಾಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಲು ಜ.20ರಂದು ಸೋಮವಾರ ಜನಾಂಗ ಬಾಂಧವರಿಂದ ಯಾವುದೇ ಘೋಷಣೆಗಳಿಲ್ಲದೆ ಶಾಂತಿಯುತವಾಗಿ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಕುಶಾಲನಗರ ಗೌಡ ಯುವಕ ಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಲ್ಲ, ನಮ್ಮ ಜನಾಂಗದವರನ್ನು ನಿಂದಿಸಿದ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಆಗ್ರಹಿಸುತ್ತಿದ್ದೇವೆ ಎಂದು ಕೊಡಗನ ಹರ್ಷ ಹೇಳಿದರು.

ಜನಾಂಗದ ಹಿತದೃಷ್ಟಿಯಿಂದ ಮಡಿಕೇರಿಯಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಯ ಬಳಿ ಎಲ್ಲರೂ ಸೇರಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ಈ ಪ್ರತಿಭಟನೆಗೆ ಕೊಡಗು ಗೌಡ ಸಮುದಾಯಗಳ ಒಕ್ಕೂಟ ಸೇರಿದಂತೆ, ಕೊಡಗು, ಮೈಸೂರು, ಬೆಂಗಳೂರಿನ ಎಲ್ಲಾ ಗೌಡ ಸಮಾಜಗಳು ಸಂಘಟನೆಗಳು, ಗೌಡ ಯುವ ವೇದಿಕೆ, ಮಹಿಳಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌಡ ಯುವಕ ಸಂಘದ ಕಾರ್ಯದರ್ಶಿ‌ ಕೋಡಿ ರೋಹಿತ್, ಖಜಾಂಚಿ ಪಳಂಗೋಟು ವಿನಯ್ ಕಾರ್ಯಪ್ಪ, ನಿರ್ದೇಶಕ ಆನಂದ್ ಕರಂದ್ಲಾಜೆ, ಡಾ. ಪ್ರವೀಣ್ ದೇವರಗುಂಡ ಇದ್ದರು.