ಸಾರಾಂಶ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳನ್ನು ಹೊರತು ಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಲೋಕಸಭಾ ಅಭ್ಯರ್ಥಿಗಳು ತಮ್ಮ ಸ್ವಗ್ರಾಮ ಯಕ್ಸಂಬಾ ಗ್ರಾಮದಲ್ಲಿ ಮತ ಚಲಾವಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳನ್ನು ಹೊರತು ಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಲೋಕಸಭಾ ಅಭ್ಯರ್ಥಿಗಳು ತಮ್ಮ ಸ್ವಗ್ರಾಮ ಯಕ್ಸಂಬಾ ಗ್ರಾಮದಲ್ಲಿ ಮತ ಚಲಾವಣೆ ಮಾಡಿದರು.ಬೆಳಗ್ಗೆಯಿಂದ ಮತಗಟ್ಟೆಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಿಸಿಲೇರುತ್ತಿದ್ದಂತೆಯೇ ಮಂದಗತಿಯಿಂದ ಮತದಾನ ಸಾಗಿದರು ಸಹ ಮತದಾನ ಕೇಂದ್ರಗಳಿಗೆ ಹೆಚ್ಚಿನ ಮತದಾರರು ಆಗಮಿಸಿ, ಮತ ಚಲಾಯಿಸಿದರು. ಸಂಜೆ 5 ಗಂಟೆಯವರೆಗೆ ನಡೆದ ಮತದಾನ ಪೈಕಿ ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೇ ಶೇ.76.5ರಷ್ಟು ಮತದಾನವಾಗಿತ್ತು.
ಚಿಕ್ಕೋಡಿ ಪಟ್ಟಣ ಸೇರಿದಂತೆ ಪ್ರತಿಯೊಂದು ಮತಗಟ್ಟೆಯಲ್ಲಿಯೂ ವಿಕಲಚೇತನರಿಗಾಗಿ ಗಾಲಿ ಖುರ್ಚಿ ಸೌಲಭ್ಯ ಅಳವಡಿಸಲಾಗಿತ್ತು. ವಿಕಲಚೇತನರು ಹಾಗೂ ವಯೋವೃದ್ಧರು ಮತಗಟ್ಟೆಗೆ ಆಗಮಿಸಿದ ಬಳಿಕ ಅವರನ್ನು ಗಾಲಿ ಖುರ್ಚಿಯ ಮೇಲೆ ಕುಳ್ಳಿರಿಸಿಕೊಂಡು, ಮತದಾನಕ್ಕೆ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.ಚಿಕ್ಕೋಡಿ ಪಟ್ಟಣದ ಗಾಂಧಿ ಮಾರ್ಕೇಟ್‌ದಲ್ಲಿರುವ ಸರ್ಕಾರಿ ಮರಾಠಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನೇಕ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಆಸಕ್ತಿಯಿಂದ ಆಗಮಿಸಿ ಮತಚಲಾಯಿಸಿದರು.ಚಿಕೊಡಿ ತಾಲೂಕಿನ ಯಡುರ ಗ್ರಾಮದ ನಿವೃತ್ತ ಶಿಕ್ಷಕ ದಿಗಂಬರ ಹೊಂಬಳಕರ್ ಇವರು 92 ವಯಸ್ಸಿನಲ್ಲಿ ಬೂತ ನಂ 47 ರಲ್ಲಿ ಮುಂಜಾನೆ ಅತಿ ಉತ್ಸಾಹ ದಿಂದ ಮತ ಚಲಾಯಿಸಿದರು.