ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಜೀರ್ಣೋದ್ಧಾರ ಹಾಗೂ ನೂತನ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂಬ ಶಿರಾಳಕೊಪ್ಪ ಕೆಳಗಿನಕೇರಿ ಪುರಾತನ ಆಂಜನೇಯ ಸ್ವಾಮಿ ಸಮಿತಿ ಕರೆಗೆ ದೇವಸ್ಥಾನಕ್ಕೆ ಸೋಮವಾರ ಮುಂಜಾನೆ ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಆಗಮಿಸಿ ನೀವು ಕೈಗೊಂಡಿರುವ ಕಾರ್ಯ ಯಶಸ್ವಿಆಗಿ ನೆರವೇರಲಿ ಎಂದು ಆಶೀರ್ವದಿಸಿದರು.

ಭಾನುವಾರ ಹಾವೇರಿಯಿಂದ ಶಿವಮೊಗ್ಗ ಮುಖಾಂತರ ಪ್ರವಾಸ ಹೊರಟಿದ್ದ ಅವರು ರಾತ್ರಿ ಉಡಗಣಿ ರಾಘವೇಂದ್ರಸ್ವಾಮಿ ಮಠದಲ್ಲಿ ವಾಸ್ತವ್ಯ ಮಾಡಿ ಸೋಮವಾರ ದ್ವಾದಶಿ ತಿಥಿಯ ಕಾರಣ ನಸುಕಿನಲ್ಲಿ ಪೂಜೆ ಸಲ್ಲಿಸಿ ಹೊರಡುವ ಪೂರ್ವದಲ್ಲಿ ಶಿರಾಳಕೊಪ್ಪ ಭಕ್ತರ ಮನವಿ ಮೇರೆಗೆ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿದರು.

ನಂತರ ಆಶೀವರ್ದಿಸಿದ ಅವರು, ಇಲ್ಲಿಯ ಸ್ಥಳೀಯ ಭಕ್ತರು ಬಹುದೊಡ್ಡ ಯೋಜನೆ ಹಾಕಿಕೊಂಡಿದ್ದೀರಿ, ಶ್ರೀ ರಾಮದೇವರ ಸಹಿತ ಆಜಂನೇಯ ಸ್ವಾಮಿ ನಿಮ್ಮೆಲ್ಲರ ಅಪೇಕ್ಷೆಯಂತೆ ಆದಷ್ಟು ಶೀಘ್ರವಾಗಿ ಕಾರ್ಯ ಕೈಗೂಡುವಂತೆ ಆಂಜನೇಯ ತಮ್ಮ ಕಾರ್ಯವನ್ನು ನಡೆಸಿಕೊಡುತ್ತಾರೆ ಎಂದರು.

ಹಾಗೆಯೇ ಶ್ರೀರಾಮದೇವರ ಸಂಕಲ್ಪವೂ ಅದೇ ಆಗಿರುವುದರಿಂದ ತಾವು ಜೀರ್ಣೋದ್ಧಾರಗೊಳಿಸಿ ನವೀಕರಿಸಿ ಲೋಕಕ್ಕೆ ನೀಡುವ ಹಾಗೂ ಎಲ್ಲರಿಗೂ ಲಾಭ ಆಗುವಂತೆ ನೀವು ಯಜ್ಞ ಯಾಗಾದಿಗಳನ್ನು ಮಾಡಿ ಮುಂದೆ ಹೆಜ್ಜೆ ಇಟ್ಟಿರುವ ನಿಮಗೆ ಒಳಿತಾಗಲಿ. ಇದಕ್ಕೆ ನಾವು ಸಹ ದೇವರಲ್ಲಿ ಪ್ರಾರ್ಥಿಸುತ್ತೇವೆ. ಈ ಕಾರ್ಯ ಕೈಗೊಳ್ಳಲು ಸಂಪತ್ತು ಬೇಕಾಗುತ್ತದೆ. ಭಕ್ತರು ನಿಮಗೆ ತನು ಮನಗಳಿಂದ ಸಹಕಾರ ನೀಡಲಿ ಎಂದು ಪ್ರಾರ್ಥಿಸುವುದಾಗಿ ಆಶೀರ್ವಚನ ನೀಡಿದರು.


ಪ್ರಾರಂಭದಲ್ಲಿ ಪಟ್ಟಣದ ಪುರೋಹಿತರಾದ ಜೋಯ್ಸ್ ಮಾತನಾಡಿ, ಪ್ರಾಣದೇವರ ಜೀರ್ಣೋದ್ಧಾರ ಮಾಡಬೇಕೆಂದು ಕೆಲವು ಸಮಯದ ಹಿಂದೆ ಯೋಚಿಸಿ ನಾವು ಕೈಗೊಳ್ಳುವ ಕಾರ್ಯ ನಿರಾತಂಕವಾಗಿ ನಡೆಯಲಿ ಎಂದು ಸಮಾಜದ ಮಹಿಳಾ ಭಜನಾ ಮಂಡಳಿ ಹಾಗೂ ಭಕ್ತರು ರಾಮಜಪವನ್ನು ಕೈಗೊಂಡು ರಾಮ ದಶಮಿ ದಿನದಂದು ರಾಮತಾರಕ ಯಜ್ಞವನ್ನು ಹಾಗೂ ಪವಮಾನ ಹೋಮವನ್ನು ಮಾಡಿದ್ದೇವೆ. ತಮ್ಮ ಆಗಮನ ಹಾಗೂ ಆಶೀರ್ವಾದದಿಂದ ಎಲ್ಲರಿಗೂ ಸಂತಸವಾಗಿದೆ ಎಂದರು.

ಶ್ರೀಗಳೊಂದಿಗೆ ಉಡಗಣಿ ಮಠದ ಅಧ್ಯಕ್ಷ ರಾಜೀವ್, ಕಾರ್ಯದರ್ಶಿ ರಾಮಚಂದ್ರ ನಾಯಕ್, ಸ್ಥಳಿಯ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯೇಂದ್ರ ರಾವ್, ಪ್ರಮುಖರಾದ ರವಿ, ದಿವಾಕರ ಶಾನಭೋಗ ಸೇರಿದಂತೆ ಮಹಿಳಾ ಭಜನಾ ಮಂಡಳಿ ಸದಸ್ಯರು ಆಗಮಿಸಿದ್ದರು.