ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ವಕೀಲ ದೇವರಾಜೇಗೌಡ ಬಳಸುತ್ತಿದ್ದ ಬಿಜೆಪಿ ಕಚೇರಿಗೆ ಮಂಗಳವಾರ ಸಂಸದ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡದ ನಾಲ್ವರು ಸದಸ್ಯರು ಕಚೇರಿಯಲ್ಲಿ ಪರಿಶೀಲನೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯಾಗಿರುವ ವಕೀಲ ದೇವರಾಜೇಗೌಡರನ್ನ ಮೇ.೧೪ರ ಬೆಳಗ್ಗೆ ೯ ಗಂಟೆಯಿಂದ ಮೇ.೧೫ರ ರಾತ್ರಿ ತನಕ ಎರಡು ದಿನ ಪೊಲೀಸ್ ಕಸ್ಟಡಿಗೆ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿತ್ತು. ಮೇ ೧೪ ರ ಮಂಗಳವಾರ ವಕೀಲ ದೇವರಾಜೇಗೌಡರನ್ನ ಡಿವೈಎಸ್ಪಿ ನೇತೃತ್ವದ ತಂಡ ಹಾಸನದ ಕಾರಾಗೃಹದಲ್ಲಿ ವಶಕ್ಕೆ ಪಡೆದು ಕೆರೆತಂದ ಬೆನ್ನಲ್ಲೇ ಎಸ್‌ಐಟಿ ತಂಡದ ಸದಸ್ಯರು ಪಟ್ಟಣದಲ್ಲಿ ವಕೀಲ ದೇವರಾಜೇಗೌಡ ಬಳಕೆ ಮಾಡುತ್ತಿದ್ದ ಬಿಜೆಪಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ ಪೆನ್‌ಡ್ರೈವ್ ಹಗರಣದ ತೂಗುಗತ್ತಿ ಇನ್ನೆಷ್ಟು ಜನರನ್ನು ಜೈಲಿಗೆ ತಳ್ಳುತ್ತೋ ಎಂಬುದು ಕುತೂಲಹಕ್ಕೆ ಕಾರಣವಾಗಿದೆ.
ಎಚ್.ವಿ.ಪುಟ್ಟರಾಜು ಮನೆಗೂ ಭೇಟಿ :ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಸಂಬಂಧಿಸಿದಂತೆ ಎಸ್‌ಐಟಿ ತಂಡದ ನಾಲ್ವರು ಸದಸ್ಯರ ತಂಡ ಪ್ರಜ್ವಲ್ ಕಾರಿನ ಮಾಜಿ ಚಾಲಕ ಕಾರ್ತಿಕ್ ಆಪ್ತನಾದ ಎಚ್.ವಿ.ಪುಟ್ಟರಾಜು(ಪುಟ್ಟಿ) ಅವರ ಮನೆಯಲ್ಲೂ ಎಸ್‌ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.