ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ದಂಡು ಮಂಡಳಿ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆದಲ್ಲಿ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ದಂಡು ಮಂಡಳಿ ಅಧ್ಯಕ್ಷ ಹಾಗೂ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಎಚ್ಚರಿಕೆ ನೀಡಿದರು.ನಗರದ ದಂಡುಮಂಡಳಿ ಸಭಾಂಗಣದಲ್ಲಿ ಬುಧವಾರ ನಡೆದ ದಂಡುಮಂಡಳಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ದಂಡುಮಂಡಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ಆದರೆ, ಸಾರ್ವಜನಿಕರ ಹೊಸ ಬೋರ್‌ವೆಲ್ ಕೊರೆಯಲು ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಅನುಮತಿ ಪಡೆಯದೇ ಹಾಗೂ ಏಕಾಏಕಿ ಬೋರ್‌ವೆಲ್ ಕೊರೆದರೆ ₹5 ಸಾವಿರ ದಂಡ ಕಟ್ಟಬೇಕಾಗುತ್ತದೆ. ವ್ಯಾಪಾರಕ್ಕಾಗಿ ಬೋರ್‌ವೆಲ್ ಕೊರೆದರೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದರು.
ಕೊಂಡಪ್ಪ ಗಲ್ಲಿಯಲ್ಲಿ ಪುರಾತನ ಬಾವಿ ಇದೆ. ಇದರಲ್ಲಿ ಸಾಕಷ್ಟು ಹೂಳು ತುಂಬಿದೆ. ಈ ಬಾವಿಯನ್ನು ಶುಚಿಗೊಳಿಸಿ ಈ ಗಲ್ಲಿಯ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗವುದು ಎಂದರು.ದಂಡುಮಂಡಳಿಯಲ್ಲಿ ಸಾಕಷ್ಟು ಸಂಚಾರ ಸಮಸ್ಯೆಯಾಗುತ್ತಿದೆ. ಪೊಲೀಸರು ನಗರದಲ್ಲಿ ಭಾರೀ ವಾಹನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗೋವಾ, ಖಾನಾಪುರದಿಂದ ಬರುವ ವಾಹನಗಳನ್ನು ದಂಡುಮಂಡಳಿ ವ್ಯಾಪ್ತಿಯಲ್ಲಿ ನಿಯಂತ್ರಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಈಗಾಗಲೇ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಮುಂಬರುವ ದಿನಗಳಲ್ಲಿ ನೀರಿನ ಅಭಾವವಾಗುವ ಸಾಧ್ಯತೆ ಇದೆ. ಇಲ್ಲಿನ ದೋಬಿ ಘಾಟದಲ್ಲಿ ಪ್ಯಾಸ್ ಫೌಂಡೇಶನ್‌ದವರು ಕೆರೆ ಹೂಳೆತ್ತಲು ಅನುಮತಿ ಕೇಳಿದ್ದಾರೆ. ಅವರಿಗೆ ಕೆಲ ನಿಬಂಧನೆಗಳನ್ನು ಹಾಕಿ ಅನುಮೋದನೆ ನೀಡಬೇಕು ಎಂದು ತಿಳಿಸಿದರು. ಇದಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ದಂಡು ಮಂಡಳಿ ವ್ಯಾಪ್ತಿಯಲ್ಲಿ ಮೂರು ಉದ್ಯಾನಗಳು ಬರುತ್ತವೆ. ಅದರ ನಿರ್ವಹಣೆ ಮಾಡಲು ಬಿಕೇನ್ ನೆರ್ ಮಿಟಾಯಿವಾಲಾ ಅವರಿಗೆ ನೀಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಶ್ರೀಧರ ತುಪ್ಪೇಕರ್, ಮುಖ್ಯ ಎಂಜಿನಿಯರ್ ರಾಜೀವ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೀದಿ ನಾಯಿ ನಿಯಂತ್ರಣಕ್ಕೆ ಎನ್‌ಜಿಒಗೆ ಆಹ್ವಾನ:ಬೆಳಗಾವಿ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ದಂಡುಮಂಡಳಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳು, ವೃದ್ಧರಿಗೆ ಸಾಕಷ್ಟು ತೊಂದರೆಯಾಗಿವೆ. ದೆಹಲಿ ಮಾದರಿಯಲ್ಲಿ ದಂಡು ಮಂಡಳಿ ವ್ಯಾಪ್ತಿಯ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು.
ದೆಹಲಿಯಲ್ಲಿ ಎನ್‌ಜಿಒಗಳು ಗುತ್ತಿಗೆ ಪಡೆದು ಬೀದಿ ನಾಯಿಗಳ ನಿಯಂತ್ರಣ ಮಾಡುತ್ತಾರೆ. ಅದೇ ಮಾದರಿಯಲ್ಲಿ ಇಲ್ಲಿಯೂ ಅಳವಡಿಸಲಾಗುವುದು. ನಾಯಿಯನ್ನು ಸಾಕುವವರು ನಾಯಿಗೆ ಕೊರಳಿಗೆ ಪಟ್ಟಿ ಕಟ್ಟುವುದು ಕಡ್ಡಾಯವಾಗಿ ದಂಡುಮಂಡಳಿಗೆ ಬಂದು ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ನಾಯಿ ಮಾಲೀಕರ ಮೇಲೆ ಕ್ರಮಕೈಗೊಳ್ಳಲಾಗುವುದು. ಇಲ್ಲಿನ ಬೀದಿ ನಾಯಿ ನಿಯಂತ್ರಣ ಮಾಡಲು ಎನ್‌ಜಿಒ ಸಂಸ್ಥೆಗಳು ಮುಂದೆ ಬರಬೇಕು. ಈ ಕುರಿತು ಪಶು ಇಲಾಖೆಯ ಅಧಿಕಾರಿಗೊಂದಿಗೆ ಸಭೆ ನಡೆಸಲಾಗುವುದು ಎಂದು ದಂಡುಮಂಡಳಿಯ ಅಧ್ಯಕ್ಷ ಜಯದೀಪ ಮುಖರ್ಜಿ ಸೂಚಿಸಿದರು.