ಓವರ್‌ಲೋಡ್‌ ವಾಹನ ವಿರುದ್ಧ ದಂಡ ಪ್ರಯೋಗ

| Published : Sep 28 2024, 01:25 AM IST

ಸಾರಾಂಶ

ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಆಯಾ ಆರ್‌ಟಿಒ ಕಚೇರಿಗಳಿಗೆ ಪತ್ರ ಬರೆಯಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಲಾರಿ, ಟಿಪ್ಪರ್‌ ಸೇರಿದಂತೆ ಇತರೆ ವಾಹನಗಳಲ್ಲಿ ಓವರ್‌ಲೋಡ್‌ ಸರಕು ಸಾಗಾಟ ಮಾಡಿದರೆ ವಿಜಯನಗರ ಜಿಲ್ಲೆಯಲ್ಲಿ ದಂಡ ವಿಧಿಸಲಾಗುತ್ತಿದೆ. ಜತೆಗೆ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಆಯಾ ಆರ್‌ಟಿಒ ಕಚೇರಿಗಳಿಗೆ ಪತ್ರ ಬರೆಯಲಾಗುತ್ತಿದೆ.

ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಓವರ್‌ಲೋಡ್‌ ಸರಕು ಹೇರಿಕೊಂಡು ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಜಿಲ್ಲೆಯ ಏಳು ವಾಹನಗಳ ಚಾಲಕರ ಡ್ರೈವಿಂಗ್‌ ಲೈಸೆನ್ಸ್‌, ವಾಹನಗಳ ನೋಂದಣಿ ಕೂಡ ಅಮಾನತಿನಲ್ಲಿಡಲಾಗಿದೆ. ಒಂದರಿಂದ ಮೂರು ತಿಂಗಳವರೆಗೆ ಅಮಾನತಿನಲ್ಲಿಡುವ ಶಿಕ್ಷೆ ಇದೆ. ಓವರ್‌ ಲೋಡ್‌ ವಾಹನ ತಪಾಸಣೆಗೆ ಆರ್‌ಟಿಒ ಇನ್‌ಸ್ಪೆಕ್ಟರ್‌ಗಳಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಲಾಗಿದೆ.

ವಾಹನಗಳಿಗೆ ದಂಡ:

ಜಿಲ್ಲೆಯಲ್ಲಿ ಆ.26ರಿಂದ ಸೆ.21ರ ವರೆಗೆ ಓವರ್‌ಲೋಡ್‌ ಸರಕು ಸಾಗಾಟ ಮಾಡುತ್ತಿದ್ದ 24 ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ₹8.28 ಲಕ್ಷ ದಂಡ ವಿಧಿಸಿದ್ದಾರೆ. ಇದರಲ್ಲಿ ಏಳು ವಾಹನಗಳು ವಿಜಯನಗರ ಆರ್‌ಟಿಒ ಕಚೇರಿ ವ್ಯಾಪ್ತಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಚಾಲಕರ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಕೂಡ ಒಂದರಿಂದ ಮೂರು ತಿಂಗಳವರೆಗೆ ಅಮಾನತಿನಲ್ಲಿಟ್ಟು ಎಚ್ಚರಿಸಿದ್ದಾರೆ.

ಅಮಾನತಿಗೆ ಪತ್ರ ವ್ಯವಹಾರ:

ಗೋವಾ, ಕೇರಳ, ತಮಿಳುನಾಡು, ಕೊಪ್ಪಳ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ, ಕಲಬುರಗಿ ಆರ್‌ಟಿಒ ಅಧಿಕಾರಿಗಳಿಗೆ ವಿಜಯನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್‌ ಚವ್ಹಾಣ್‌, ಓವರ್‌ ಲೋಡ್‌ ಸರಕು ಸಾಗಾಟದೊಂದಿಗೆ ಜಿಲ್ಲೆ ಪ್ರವೇಶ ಮಾಡಿದ್ದ ವಾಹನಗಳ ಚಾಲಕರ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ವಾಹನಗಳ ನೋಂದಣಿ ಅಮಾನತಿನಲ್ಲಿಡಲು ಪತ್ರ ಬರೆದಿದ್ದಾರೆ.

ಕೊಪ್ಪಳ ಭಾಗದಿಂದ ಮರಳು, ಮರ್ರಂ, ಜಲ್ಲಿಕಲ್ಲು ಹೇರಿಕೊಂಡು ಲಾರಿ, ಟಿಪ್ಪರ್‌ ಲಾರಿಗಳು ಆಗಮಿಸುತ್ತಿವೆ. ಓವರ್‌ಲೋಡ್‌ ಹೇರಿಕೊಂಡು ಬರುವ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ನಿಯಮ ಮೀರಿದ ವಾಹನಗಳಿಗೆ ದಂಡ ವಿಧಿಸಿ, ಜೊತೆಗೆ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಸೂಚಿಸಿದ್ದಾರೆ. ಹಾಗಾಗಿ ಹೊಸಪೇಟೆ ಆರ್‌ಟಿಓ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ನಿಯಮ ಏನು ಹೇಳುತ್ತದೆ:

ಆರು ಚಕ್ರದ ವಾಹನಗಳು 18.5 ಟನ್‌ ಸರಕು ಸಾಗಾಟ ಮಾಡಬಹುದು. 10 ಚಕ್ರದ ವಾಹನಗಳು 28 ಟನ್‌ ಮತ್ತು 12 ಚಕ್ರದ ವಾಹನಗಳು 35 ಟನ್‌ ಸರಕು ಸಾಗಾಟ ಮಾಡಬಹುದು. ಆದರೆ, ಇದನ್ನು ಮೀರಿ ವಾಹನಗಳಲ್ಲಿ ಓವರ್‌ಲೋಡ್‌ ಹೇರಲಾಗುತ್ತಿದೆ. ಇನ್ನು ರಾಜಧನ ಪಾವತಿಸದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಣ್ಣು ತಪ್ಪಿಸಿ ಮರಳು, ಮರ್ರಂ, ಜಲ್ಲಿ ಕಲ್ಲು ಸಾಗಾಟ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಗಣಿ ಇಲಾಖೆ ಕೂಡ ದಂಡ ವಿಧಿಸಿ ಕ್ರಮಕೈಗೊಂಡಿದೆ.

ಜಿಲ್ಲೆಯಲ್ಲಿ ಓವರ್‌ಲೋಡ್‌ ಮಾಡಿಕೊಂಡು ಬರುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರನ್ವಯ ಕ್ರಮ ವಹಿಸಲಾಗಿದೆ. ಈಗಾಗಲೇ ಸಂಬಂಧಿಸಿದ ಆರ್‌ಟಿಒಗಳಿಗೂ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಪತ್ರ ಬರೆಯಲಾಗಿದೆ ಎನ್ನುತ್ತಾರೆ ಆರ್‌ಟಿಒ ವಸಂತ್‌ ಚವ್ಹಾಣ್‌.