ಸಾರಾಂಶ
ನರಗುಂದ: ಕೆಟ್ಟ ಸಂಸ್ಕಾರ ಹೊಂದಿರುವ ವ್ಯಕ್ತಿಯನ್ನು ತಪಸ್ಸಿನ ಶಕ್ತಿಯಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ ಎಂದು ಮಾಜಿ ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಶ್ಲಾಘಿಸಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ದೀಪಾವಳಿ ಹಬ್ಬಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಪಸ್ಸಿನ ಶಕ್ತಿಗೆ ಎಂತಹ ಕೆಟ್ಟ ಸಂಸ್ಕಾರವುಳ್ಳವರು ಪರಿವರ್ತನೆ ಆಗುತ್ತಾರೆ ಎಂದರು.ಇಲ್ಲಿ ಯಾವುದೇ ಜಾತಿ, ಧರ್ಮ, ಕುಲ, ಗೋತ್ರ ಕೇಳುವುದಿಲ್ಲ. ಎಲ್ಲರೂ ಪರಮಾತ್ಮನ ಮಕ್ಕಳು. ನಾವೆಲ್ಲ ಒಂದೇ ಎಂಬುದು ಇಲ್ಲಿಯ ಧ್ಯೇಯವಾಗಿದೆ ಎಂದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರು ಮಾತನಾಡಿ, ದೀಪಾವಳಿ ಹಬ್ಬ ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ. ದೀಪಾವಳಿ ಎಂದರೆ ಬಡವರಿಂದ ಶ್ರೀಮಂತರವರೆಗೆ, ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರೂ ಖುಷಿಯಿಂದ ಆಚರಿಸುವ ಹಬ್ಬವಾಗಿದೆ ಎಂದರು.
ಪ್ರತಿಯೊಬ್ಬರ ಮನಸ್ಸಿನ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಿಕೊಂಡು ಈರ್ಷೆ, ದ್ವೇಷ, ಅಸೂಯೆ, ದುರ್ಬಲತೆ, ಆಲಸ್ಯ ಎಂಬ ಹಳೆಯ ಖಾತೆಯನ್ನು ಸಮಾಪ್ತಿ ಮಾಡಿಕೊಂಡು ಎಲ್ಲರ ಬಗ್ಗೆ ಶುಭ ಭಾವನೆ ಶುಭಕಾಮನೆ ಎಂಬ ಸಿಹಿ ಹಂಚಿ, ವ್ಯರ್ಥ ಪರಚಿಂತನೆಗಳೆಂಬ ಹಳೆಯ ಬಟ್ಟೆ ತ್ಯಜಿಸಿ ಶ್ರೇಷ್ಠ ವಿಚಾರ ಎಂಬ ಹೊಸ ಬಟ್ಟೆ ಧರಿಸಿಕೊಳ್ಳುವುದೇ ನಿಜವಾದ ದೀಪಾವಳಿ ಎಂದರು.ರಾಜು ಕಲಾಲ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ಎಂ. ಕಲ್ಲನಗೌಡ, ಪುಷ್ಪ ಸಂಡೂರ, ಸ್ಫೂರ್ತಿ ಆಡಿನ, ಶಿವು ನಾಶಿ, ಉಮಾ ನಾಶಿ, ನಾಗರಾಜ ನಾಶಿ, ಶ್ವೇತಾ ನಾಶಿ, ಗೌರಮ್ಮ ಗಂಗಲ, ಶರಣು ಭೋಸಲೆ, ಈಶ್ವರೀಯ ಪರಿವಾರದವರು ಇದ್ದರು. ವಿ.ಎನ್. ಕೊಳ್ಳಿಯವರ ಸ್ವಾಗತಿಸಿದರು. ಹನುಮಂತಪ್ಪ ಮಾದರ ನಿರೂಪಿಸಿದರು. ಡಾ. ವೀರನಗೌಡ ವೀರನಗೌಡ್ರ ವಂದಿಸಿದರು.