ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಿಟಿ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಾಲ್ ಗಣಪತಿ ಪ್ರತಿಷಾಪನಾ ಮಹೋತ್ಸವಕ್ಕೆ ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಶನಿವಾರ ಮಧ್ಯಾಹ್ನ ಸುಮಾರು ೧೨:೩೫ರ ವೇಳೆಗೆ ಮಹಾಮಂಗಳಾರತಿಯೊಂದಿಗೆ ಚಾಲನೆ ದೊರಕಿತು. ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಮೊದಲು ಕೋರುತ್ತೇನೆ. ಎಲ್ಲರಿಗೂ ಆರೋಗ್ಯ, ಆಯಸ್ಸು ನೀಡಿ ಕಾಪಾಡಲಿ, ಮಳೆ, ಬೆಳೆ, ಸುಖ, ಶಾಂತಿಯನ್ನು ಹಾಸನದ ಜನತೆಗೆ ಕೊಡಲೆಂದು ಗಣೇಶನಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಾನು ಅಧ್ಯಕ್ಷನಾಗಿ ನಗರದ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ಕೊಡುತ್ತೇನೆ. ಏನೇ ಸಮಸ್ಯೆ ಇಟ್ಟುಕೊಂಡು ನಮ್ಮ ಬಳಿ ಬಂದರೇ ಸ್ಪಂದಿಸುವುದಾಗಿ ಹೇಳಿದರು. ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ. ಎಚ್. ನಾಗರಾಜು ಮಾತನಾಡಿ, ಹಾಸನ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಶ್ರೀ ಗಣಪತಿ ಸೇವಾ ಸಮಿತಿ ೭೦ನೇ ವರ್ಷದ ಗಣೇಶ ಪ್ರತಿಷ್ಠಾಪನೆಯ ಉದ್ಘಾಟನೆ ಆಗುವ ಮೂಲಕ ಮೊದಲ ದಿನ ಪ್ರಾರಂಭವಾಗಿದೆ. ಸಪ್ಟಂಬರ್ ೭ರ ಶನಿವಾರದಂದು ೭೦ನೇ ವರ್ಷದ ಒಂಬತ್ತುವರೆ ಅಡಿಯ ಮಹಾಗಣಪತಿಯ ಪ್ರತಿಷ್ಠಾಪಿಸಿ ಸೆಪ್ಟಂಬರ್ ೨೮ರ ಶನಿವಾರದವರೆಗೆ ನಾನಾ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮಧ್ಯಾಹ್ನ ೧೨:೩೦ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ. ಬಸ್ ನಿಲ್ದಾಣದ ಗಣಪತಿ ಇತಿಹಾಸವುಳ್ಳದ್ದಾಗಿದ್ದು, ಹಾಸನ ತಾಲೂಕು ಎಲ್ಲಾ ಕಡೆ ಉತ್ತಮ ಮಳೆಯಾಗಿ ಸಂತೋಷದಿಂದ ಬದುಕಬೇಕೆಂದು ಗಣಪತಿ ಬಳಿ ಕೇಳಿಕೊಳ್ಳಲಾಗಿದೆ. ಈ ಗಣಪತಿ ವೀಕ್ಷಣೆ ಮಾಡಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಗ್ರಾಮೀಣ ಪ್ರದೇಶ ಮತ್ತು ನೆರೆಹೊರೆಯ ಜಿಲ್ಲೆಗಳಿಂದ ಬರುತ್ತಾರೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿರಬಹುದು, ವೇಷಭೂಷಣ ಸ್ಪರ್ಧೆ, ಸಂಗೀತ, ನಾಟಕ, ಜನಪದ ಗೀತೆ, ಭಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ಮಾಡಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕೊನೆ ದಿನ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಹಾಗಣಪತಿಯ ಮತ್ತು ಶ್ರೀ ಸ್ವರ್ಣಗೌರಿಯವರ ಉತ್ಸವವು ಪ್ರಾರಂಭವಾಗಿ ಸ್ಥಳೀಯ ಹಾಗೂ ಪರಸ್ಥಳಗಳಿಂದ ಆಗಮಿಸುವ ಸಾಂಸ್ಕೃತಿಕ, ಜಾನಪದ ಕಲಾತಂಡಗಳೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ಸಂಜೆ ೬:೩೦ಕ್ಕೆ ದೇವಿಗೆರೆ ತಲುಪಲಿದೆ. ರಾತ್ರಿ ೮ ಗಂಟೆ ಸುಮಾರಿಗೆ ದೇವಿಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ವಿಸರ್ಜಿಸಲಾಗುತ್ತದೆ. ಅಕ್ಟೋಬರ್ ೧ರಂದು ಮಂಗಳವಾರ ೧೨.೩೦ಕ್ಕೆ ಮಹಾಗಣಪತಿ ಮಹೋತ್ಸವದ ಅಂಗವಾಗಿ ಪ್ರಸಾದ ರೂಪದ ಅನ್ನ ಸಂತರ್ಪಣೆಯನ್ನು ನಡೆಸಲಾಗುವುದು. ಉತ್ಸವದ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಕೋರಿದರು. ಇದೇ ವೇಳೆ ಶ್ರೀ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಚನ್ನವೀರಪ್ಪ, ಸಹಕಾರ್ಯದರ್ಶಿ ವೈ.ಎಸ್. ಮುರುಗೇಂದ್ರ, ಖಜಾಂಚಿ ಎಂ.ಎಸ್. ಶ್ರೀಕಂಠಯ್ಯ, ಧರ್ಮದರ್ಶಿಗಳಾದ ಬೂದೇಶ್, ಎಚ್.ಟಿ. ಶೇಖರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಸಿ. ರಾಮಚಂದ್ರಯ್ಯ, ಎಚ್.ಎಂ. ಸುರೇಶ್ ಕುಮಾರ್, ಎಚ್.ಪಿ. ಕಿರಣ್, ಎಂ.ಕೆ. ಕಮಲ್ ಕುಮಾರ್, ಎಚ್.ಡಿ. ದೀಪಕ್, ಲೀಲಾಕುಮಾರ್ ಹಾಗೂ ಗಿರೀಗೌಡ, ಕಸಾಪ ಮಾಜಿ ಅಧ್ಯಕ್ಷ ರವಿನಾಕಲಗೂಡು, ಗಿರೀಶ್ ಚನ್ನವೀರಪ್ಪ, ನೇತ್ರಾವತಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್, ವಿಷ್ಣು ಸೇನೆ ಅಧ್ಯಕ್ಷ ಮಹಂತೇಶ್, ಹಿರಿಯ ಪತ್ರಕರ್ತ ರವಿಕುಮಾರ್ ಇತರರು ಉಪಸ್ಥಿತರಿದ್ದರು.