ಸಾರಾಂಶ
ಕಡೂರು, ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆ ಸೌಲತ್ತು ವಿತರಣೆಯಲ್ಲಿ ಮಾನದಂಡ ಗಾಳಿಗೆ ತೂರಿ ಅಕ್ರಮ ನಡೆಸಿದ್ದ ಹಿನ್ನೆಯಲ್ಲಿ ಫಲಾನುಭವಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆಗೆ ಹಾಜರಾದ ಕೇವಲ 44 ಮಂದಿ ಪೈಕಿ 19ಮಂದಿ ಅನರ್ಹರಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಚಾರಣೆಗೆ ಹಾಜರಾದ ಕೇವಲ 44 ಮಂದಿಯಲ್ಲಿ 19 ಮಂದಿ ನಕಲಿ!
ಕಡೂರು ಪಟ್ಟಣ ಸೇರಿ ಕಸಬಾ ಹೋಬಳಿ ಫಲಾನುಭವಿಗಳ ವಿಚಾರಣೆ
ಕಡೂರು ಕೃಷ್ಣಮೂರ್ತಿ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆ ಸೌಲತ್ತು ವಿತರಣೆಯಲ್ಲಿ ಮಾನದಂಡ ಗಾಳಿಗೆ ತೂರಿ ಅಕ್ರಮ ನಡೆಸಿದ್ದ ಹಿನ್ನೆಯಲ್ಲಿ ಫಲಾನುಭವಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆಗೆ ಹಾಜರಾದ ಕೇವಲ 44 ಮಂದಿ ಪೈಕಿ 19ಮಂದಿ ಅನರ್ಹರಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ಪಿಂಚಣಿ ಸೌಲಭ್ಯ ಪಡೆಯಲು ಇರುವ ವಯೋಮಿತಿ ಬಗ್ಗೆ ನಕಲಿ ದಾಖಲೆ ನೀಡಿ ವಂಚಿಸಲಾಗಿತ್ತು. ಈ ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಉಪ ತಹಸೀಲ್ದಾರ್ ಕಲ್ಮುರಡಪ್ಪ ಅವರನ್ನು ಅಮಾನತು ಮಾಡಿದ್ದಲ್ಲದೆ ತನಿಖೆಗೆ ಆದೇಶಿಸಿದ್ದಾರೆ. ಅದರನ್ವಯ ಕಡೂರು ಕಸಬಾ ಹೋಬಳಿ 650 ಫಲಾನುಭವಿಗಳಿಗೆ ನೋಟಿಸ್ ಜಾರಿಮಾಡಿ ಅಕ್ಟೋಬರ್ 3ರಿಂದ ವಿಚಾರಣೆ ಆರಂಭಿಸಲಾಗಿದೆ. ಸಂಧ್ಯಾಸುರಕ್ಷಾ ಯೋಜನೆ ಸೌಲಭ್ಯಕ್ಕೆ 65 ವರ್ಷ ವಯೋ ಮಿತಿ ನಿಗದಿಪಡಿಸಲಾಗಿದೆ. ಅಲ್ಲದೆ ದುಡಿವ ಮಕ್ಕಳಿದ್ದರೆ ಈ ಸವಲತ್ತು ನೀಡುವಂತಿಲ್ಲ. ಈ ನಿಯಮ ಮೀರಿ 50ರಿಂದ55 ವರ್ಷದವರಿಗೂ ಆಧಾರ್ ಕಾರ್ಡ್‌ನಲ್ಲಿ 65 ವರ್ಷವೆಂದು ತೋರಿಸಿ ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ನೀಡಲಾಗಿತ್ತು. ಇದರಲ್ಲಿ ಫಲಾನುಭವಿಗೆ ಮಾಸಿಕ ₹1200 ಸಂದಾಯವಾಗುತ್ತಿತ್ತು. ಅದೇ ರೀತಿ ಇಂದಿರಾಗಾಂಧಿ ಪಿಂಚಣಿಯಲ್ಲಿ 60ವರ್ಷ ತುಂಬಿದವರಿಗೆ ಮಾಸಿಕ ₹800 ನೀಡುತ್ತಿದ್ದು, ಇಲ್ಲೂ ಅಕ್ರಮದ ವಾಸನೆ ಕಂಡು ಬಂದಿದೆ.ಸದ್ಯ ಕಡೂರು ಪಟ್ಟಣ ಸೇರಿ ಕಸಬಾ ಹೋಬಳಿ ಫಲಾನುಭವಿಗಳು ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ತಾಲೂಕು ಕಚೇರಿಯಿಂದ ನೊಟೀಸ್ ನೀಡಿದ್ದು ಹಾಜರಾದವರ ದಾಖಲೆ ಪರಿಶೀಲಿಸಿ ಅರ್ಹತೆ ಇದ್ದಲ್ಲಿ ಉಳಿಸಿಕೊಂಡು, ನಕಲಿ ದಾಖಲೆ ನೀಡಿದವರನ್ನು ಯೋಜನೆಯಿಂದ ಕೈಬಿಡಲಾಗುತ್ತಿದೆ.
ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ಪಿಂಚಣಿ ಯೋಜನೆಗಳಡಿ ನಕಲಿ ದಾಖಲೆ ನೀಡಿ ಕಡಿಮೆ ವಯಸ್ಸಿನವರು ಸವಲತ್ತು ಪಡೆಯುತ್ತಿದ್ದ ಬಗ್ಗೆ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ ಸ್ವಾಮಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ಮಾಡಲಾಗುತ್ತಿದೆ. ಅಲ್ಲದೆ ಕೆಲ ಸಂಧ್ಯಾ ಸುರಕ್ಷಾ ಫಲಾನುಭವಿಗಳಿಗೆ 65ರ ಬದಲಿಗೆ 60ವರ್ಷವಾಗಿದ್ದರೆ ಅವರಿಗೆ ಸಂಧ್ಯಾಸುರಕ್ಷಾ ರದ್ದು ಮಾಡಿ ಇಂದಿರಾ ಗಾಂಧಿ ಪಿಂಚಣಿ ಪಡೆಯುವಂತೆ ಶಿಫಾರಸು ಕೂಡ ಮಾಡಲಾಗುತ್ತಿದೆ.ಕಡೂರು ಸೇರಿದಂತೆ ಕಸಬಾ ಹೋಬಳಿಯಲ್ಲಿ 1593 ಫಲಾನುಭವಿಗಳಿದ್ದು, ನೋಟಿಸ್ ನೀಡಿ ವಾರದಲ್ಲಿ ನಿಗದಿತ ದಿನ ನೂರಕ್ಕೂ ಅಧಿಕ ಫಲಾನುಭವಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಧ್ಯಕ್ಕೆ ತನಿಖೆ ಪ್ರಗತಿಯಲ್ಲಿದೆ. ಇದಲ್ಲದೆ ತಾಲೂಕಿನಾದ್ಯಂತ ಇರುವ ಅನರ್ಹ ಫಲಾನುಭವಿಗಳ ಪತ್ತೆ ಮಾಡಿ ಕ್ರಮಕೈಗೊಂಡು ನಿಜವಾದ ಫಲಾಭವಿಗಳಿಗೆ ಸವಲತ್ತು ದೊರಕಿಸುವ ನಿಟ್ಟಲ್ಲಿ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ತನಿಖಾ ತಂಡದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಂಜುನಾಥಸ್ವಾಮಿ ಜೊತೆ ಸಿಬ್ಬಂದಿ ಸಮ್ಯಕ್, ನಂದನಾ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ.-- ಬಾಕ್ಸ್ ಸುದ್ದಿಗೆ --ವಿಚಾರಣೆಗೆ ಹಾಜರಾಗದಿದ್ದರೂ ಕ್ರಮ ತಪ್ಪಲ್ಲ
ಕಡೂರು ಕಸಬಾ ಹೋಬಳಿ ಒಟ್ಟು 650 ಫಲಾನುಭವಿಗಳಿಗೆ ನೋಟಿಸ್ ನೀಡಿದ್ದು ಈ ವರೆಗೆ ತನಿಖೆಗೆ ಹಾಜರಾಗಿದ್ದ 44 ಜನರಲ್ಲಿ 19 ಮಂದಿಯನ್ನು ಅನರ್ಹಗೊಳಿಸಲಾಗಿದೆ. 25 ಮಂದಿ ಮಾತ್ರ ಅರ್ಹತೆ ಪಡೆದಿದ್ದಾರೆ. ಇನ್ನು ಬಾಕಿ ಉಳಿದ 592 ಫಲಾನುಭವಿಗಳು ಹಾಜರಾಗಬೇಕಿದೆ. ವಿಚಾರಣೆಗೆ ಹಾಜರಾಗದೇ ಇರುವವರ ವಿರುದ್ಧ ಕ್ರಮವಹಿಸಲು ಮುಂದಾಗಿರುವ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಸವಲತ್ತು ದುರುಪಯೋಗವಾಗಿದ್ದಲ್ಲಿ ಸರ್ಕಾರಿ ಸವಲತ್ತು ಹಿಂಪಡೆಯಲಿದ್ದಾರೆ.15ಕಕೆಡಿಯು1.
ಕಡೂರಿನ ತಾಲೂಕು ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಕ್ರಮ ಕುರಿತು ಫಲಾನುಭವಿಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.