ಪಿಂಚಣಿದಾರರ ತುಟ್ಟಿಭತ್ಯೆ, ಸಮಸ್ಯೆ ನಿವಾರಣೆಗೆ ಆಗ್ರಹ

| Published : Dec 09 2024, 12:45 AM IST

ಪಿಂಚಣಿದಾರರ ತುಟ್ಟಿಭತ್ಯೆ, ಸಮಸ್ಯೆ ನಿವಾರಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪಿಂಚಣಿದಾರರಿಗೆ ನಿಯಮಿತವಾಗಿ ತುಟ್ಟಿಭತ್ಯೆ ನೀಡುವುದು ಹಾಗೂ ಪಿಂಚಣಿದಾರರ ಸಕಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿವಾರಣೆ ಮಾಡುವಂತೆ ಆಗ್ರಹಿಸಿ ಇಪಿಎಸ್-೯೫ ಪಿಂಚಣಿದಾರರು ನಗರದ ಇಪಿಎಫ್ ಕಚೇರಿ ಎದುರು ಕೇಂದ್ರ ಸರ್ಕಾರದ ನಿವೃತ್ತ ನೌಕರರು ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಿಂಚಣಿದಾರರಿಗೆ ನಿಯಮಿತವಾಗಿ ತುಟ್ಟಿಭತ್ಯೆ ನೀಡುವುದು ಹಾಗೂ ಪಿಂಚಣಿದಾರರ ಸಕಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿವಾರಣೆ ಮಾಡುವಂತೆ ಆಗ್ರಹಿಸಿ ಇಪಿಎಸ್-೯೫ ಪಿಂಚಣಿದಾರರು ನಗರದ ಇಪಿಎಫ್ ಕಚೇರಿ ಎದುರು ಕೇಂದ್ರ ಸರ್ಕಾರದ ನಿವೃತ್ತ ನೌಕರರು ಧರಣಿ ನಡೆಸಿದರು.

ಕಳೆದ ೧೦-೧೨ ವರ್ಷಗಳಿಂದ ಹೋರಾಟ ಮಾಡುತ್ತಿರುವ ದೇಶದ ೭೮ ಲಕ್ಷ ಇಪಿಎಸ್-೯೫ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ನೀಡದೆ ಈ ಸೆಲ್ಫ್‌ ಫಂಡೆಡ್ ಪೆನ್ಷನ್ ಯೋಜನೆಯಲ್ಲಿ ಪ್ರತಿ ತಿಂಗಳು ಸರಾಸರಿ ₹1171 ಪಿಂಚಣಿ ಭವಿಷ್ಯ ನಿಧಿ ಸಂಸ್ಥೆಯಿಂದ ನೀಡಲಾಗುತ್ತಿದೆ. ಕಾರ್ಮಿಕ ೬೦ನೇ ವಯಸ್ಸಿಗೆ ನಿವೃತ್ತಿಯಾದಾಗ ಸರಾಸರಿ ₹1171 ನಿಶ್ಚಿತ ಪಿಂಚಣಿ ಪ್ರಾರಂಭವಾದರೆ ಅವನು ೭೦-೮೦ ವರ್ಷ ಬದುಕಿದ್ದಾಗಲೂ ₹1171 ಮಾತ್ರ ಪಿಂಚಣಿ ನೀಡುವುದು ಯಾವ ಆರ್ಥಿಕ ತಜ್ಞನ ಜಾಣ್ಮೆಯ ಯೋಜನೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಪ್ರತಿ ಆರು ತಿಂಗಳಿಗೊಮ್ಮೆ ದೇಶದ ಪ್ರೈಸ್ ಇಂಡೆಕ್ಸ್‌ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನ್ನ ನೌಕರನಿಗೆ ಸೇವೆಯಲ್ಲಿದ್ದಾಗ ಹಾಗೂ ನಿವೃತ್ತಿಯಾಗಿ ಪಿಂಚಣಿ ಪಡೆಯುವಾಗಲೂ ತುಟ್ಟಿಭತ್ಯೆ ಹೆಚ್ಚಳ ಮಾಡುವುದಿಲ್ಲವೇ? ಅವರಷ್ಟೇ ಮಾರುಕಟ್ಟೆ ಬೆಲೆ ಏರಿಕೆಗೆ ಹಣದ ಮುಗ್ಗಟ್ಟು ಎದುರಿಸುತ್ತಾರೆಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಎನ್‌ಎಸಿ ಉಪಾಧ್ಯಕ್ಷ ವೀರಕುಮಾರ ಗಡಾದ ಮಾತನಾಡಿ, ೨೦೦೪ರಲ್ಲಿ ಪಿಂಚಣಿದಾರ ಮರಣ ಹೊಂದಿದ ಮೇಲೆ ಆತನ ಹೆಂಡತಿಗೆ ಅರ್ಧ ಪ್ರಮಾಣದಲ್ಲಿ ಪಿಂಚಣಿ ನಂತರ ಆಕೆಯೂ ಮರಣ ಹೊಂದಿದ ಮೇಲೆ ಕುಟುಂಬದ ವಾರಸುದಾರರಿಗೆ, ಪಿಂಚಣಿದಾರನ ವಂತಿಗೆಯಾಗಿ ನೀಡಿದ ಇಡುಗಂಟನ್ನು ವಾಪಸ್‌ ನೀಡಲಾಗತ್ತಿತ್ತು. ಇದ್ದನ್ನು ಚಂದಾದಾರರ ಗಮನಕ್ಕೂ ತಾರದೇ ನಿಲ್ಲಿಸಲಾಗಿದೆ. ಭವಿಷ್ಯ ನಿಧಿ ಸಂಸ್ಥೆ ಆ ಹಣವನ್ನೆಲ್ಲಾ ನುಂಗಿ ಹಾಕುತ್ತಿದೆ. ಪಿಂಚಣಿದಾರನ ಇಡುಗಂಟನ್ನು ಕಬಳಿಸುವುದು ಮೋಸವಲ್ಲವೇ ಎಂದು ಆಕ್ರೋಶ ಹೊರಹಾಕಿದರು.

೨೦೧೩ಕ್ಕೂ ಮುಂಚೆ ಆಗಿನ ಕಾಂಗ್ರೆಸ್ ಸರ್ಕಾರ ಕೋಶಿಯಾರಿ ಕಮಿಟಿ ರಚಿಸಿ ಕನಿಷ್ಠ ಪಿಂಚಣಿ ಹೆಚ್ಚಳದ ಸಂಭವದ ಕುರಿತು ವರದಿ ನೀಡಲು ಆದೇಶಿಸಿತ್ತು. ಆ ವರದಿಯಂತೆ ಕನಿಷ್ಠ ಪಿಂಚಣಿ ₹3000 ನೀಡಬೇಕೆಂದಿತ್ತು. ಅದರಂತೆ ಬಿಜೆಪಿ ಸಂಸದ ಪ್ರಕಾಶ ಜಾವಡೇಕರ ೨೦೧೩ರಲ್ಲೇ ಮುಂಬರುವ ಲೋಕಸಭೆ ಚುನಾವಣೆ ನಡೆದು ನಾವು ಅಧಿಕಾರಕ್ಕೆ ಬಂದರೆ ಕನಿಷ್ಠ ಪಿಂಚಣಿ ₹3 ಸಾವಿರ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರು ಈ ವಿಷಯವಾಗಿ ಅಜ್ಞಾತವಾಗಿದ್ದಾರೆ ಎಂದರು. ಪ್ರಧಾನಿ ಮೋದಿ ಅವರನ್ನು ಸಂಸದೆ ಹೇಮಮಾಲಿನಿ ನೇತೃತ್ವದಲ್ಲಿ ಎನ್‌ಎಸಿ ಮುಖಂಡ ಕಮಾಂಡರ್ ಅಶೋಕ ರಾವುತ್ ಅವರ ನಿಯೋಗದೊಡನೆ ಎರಡು ಬಾರಿ ಸ್ವತಃ ಭೇಟಿಯಾದಾಗ ಮೋದಿಯವರು ನಿಮ್ಮ ಕೇಸ್ ತಿಳಿದಿದೆ. ನನಗೆ ಸಮಯ ಬೇಕು. ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟು ಮೂರು ವರ್ಷವಾಗಿದೆ. ಆದರೂ ಬೇಡಿಕೆ ಈಡೇರಿಲ್ಲ. ಈ ಮೂರು ವರ್ಷದಲ್ಲಿ ೩ ಲಕ್ಷ ಪಿಂಚಣಿದಾರರು ಮರಣ ಹೊಂದಿದ್ದಾರೆ ಎಂದು ನೋವಿನಿಂದ ನುಡಿದರು. ಈ ವಏಳೆ ಎನ್‌ಎಸಿ ಸಂಚಾಲಕ ಜಿ.ಎಸ್. ದೇಗಿನಾಳ, ಎನ್.ಎ.ಸಿ. ಜಂಟಿ ಕಾರ್ಯದರ್ಶಿ ಗುರುಭಟ್ಟ, ಎನ್.ಎ.ಸಿ. ಸಂಘಟಕ ಸಾತಿಪುಲೆ, ತೇರದಾಳ ಸುಮಾರು ೧೦೦ಕ್ಕೂ ಹೆಚ್ಚು ಪಿಂಚಣೀದಾರರು ಉಪಸ್ಥಿತರಿದ್ದರು.