ಮಳೆ-ಬಿರುಗಾಳಿಗೆ ತತ್ತರಿಸಿದ ಜನ: ಅಪಾರ ನಷ್ಟ

| Published : May 29 2024, 01:00 AM IST

ಸಾರಾಂಶ

ಸುರಪುರ ತಾಲೂಕಿನ ಕರ್ನಾಳ ಗ್ರಾಮದಲ್ಲಿ ಆಕಳ ಕರು ಸಿಡಿಲಿಗೆ ಬಲಿಯಾದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ವಿವಿಧೆಡೆ ಸೋಮವಾರ ಜೋರಾಗಿ ಬೀಸಿದ ಬಿರುಗಾಳಿ ಮಳೆಗೆ 7 ಮನೆಗಳು ಕುಸಿತಗೊಂಡಿದ್ದು, 85 ಮನೆಗಳ ತಗಡುಗಳು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಸಿಡಿಲಿಗೆ ಒಂದು ಆಕಳು ಹಾಗೂ ಕರು ಮೃತಪಟ್ಟಿವೆ.

ಕಳೆದೊಂದು ವಾರದಿಂದ ಸುರಪುರ ತಾಲೂಕಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಮನೆಗಳು, ವಿದ್ಯುತ್ ಕಂಬಗಳು, ತೋಟಗಾರಿಕೆ ಬೆಳೆಗಳಿಗೆ ನಷ್ಟ ಉಂಟಾಗಿದೆ. ಬಿರುಗಾಳಿಯ ಅಬ್ಬರಕ್ಕೆ ತಾಲೂಕಿನ ಜನತೆಯೂ ತತ್ತರಿಸಿ ಹೋಗಿದ್ದಾರೆ.

ತಾಲೂಕಿನ ಅರಕೇರಾ, ದೇವರಗೋನಾಲ, ಏವೂರ, ರಾಯಗೇರಾ ಸೇರಿದಂತೆ ಏಳು ಮನೆಗಳು ಕುಸಿತಗೊಂಡಿವೆ. ಇದರಿಂದ ಮನೆಯ ಮಾಲೀಕರು ದಿಕ್ಕು ದೋಚದಂತಾಗಿದ್ದಾರೆ. ಇರುವ ಮಾಳಿಗೆ ಮನೆಯೂ ಕುಸಿತವಾಗಿರುವುದರಿಂದ ಸರಿಪಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮಳೆಗಾಲ ಇನ್ಮೂರು ತಿಂಗಳು ಹೇಗೆ ಕಳೆಯಬೇಕು ಎಂಬುದು ತಿಳಿಯುತ್ತಿಲ್ಲ ರೈತರು ತಿಳಿಸಿದ್ದಾರೆ.

ತಾಲೂಕಿನ ಕರ್ನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲಿಗೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು ಕರುವಿಗೆ ಸಿಡಿಲು ಬಡಿದು ಮೃತಪಟ್ಟಿವೆ. ಬಿರುಗಾಳಿ ಮಳೆಗೆ 85 ಮನೆಗಳ ಮೇಲ್ಚಾವಣಿಗೆ ಹಾಕಲಾಗಿದ್ದ ತಗಡು ಹಾರಿ ಹೋಗಿವೆ. ಕೆಲ ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಸ್ಥಳಕ್ಕೆ ಶಿರಸ್ತೇದಾರ ಬಸವರಾಜ ಬಿರಾದಾರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಭೇಟಿ ಪರಿಶೀಲಿಸಿದರು. ಮುಖಂಡ ಮರಿಲಿಂಗಪ್ಪ ಇದ್ದರು.